SSC ಹುದ್ದೆಗಳಿಗೆ ಹಿಂದಿ/ ಇಂಗ್ಲಿಷ್‌ನಲ್ಲೇ ಪರೀಕ್ಷೆ

0
25

ಕರ್ನಾಟಕ ಮತ್ತು ಕೇರಳ ವಲಯಕ್ಕೆ ಸೇರಿದ ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಕನ್ನಡಿಗರು ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲೇ ಬರೆಯುವ ಅನಿವಾರ್ಯತೆ ಎದುರಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕರ್ನಾಟಕ ಮತ್ತು ಕೇರಳ ವಲಯದಲ್ಲಿ ಖಾಲಿ ಇರುವ 3000ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸುಮಾರು 3000 ಹುದ್ದೆಗಳಲ್ಲಿ ದ್ವಿತಿಯ ದರ್ಜೆ ಸಹಾಯಕ (ಕ್ಲರ್ಕ್), ಜ್ಯೂನಿಯರ್ ಸೆಕ್ರೆಟ್ರಿಯೇಟ್ ಅಸಿಸ್ಟಂಟ್‌, ಪೋಸ್ಟಲ್ ಅಸಿಸ್ಟಂಟ್‌, ಸಾರ್ಟಿಂಗ್ ಅಸಿಸ್ಟಂಟ್‌ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಸೇರಿವೆ.

‘ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ದುರಂತವೆಂದರೆ ಕನ್ನಡಿಗರು ಈ ನೇಮಕಾತಿಗಾಗಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗಿದೆ. ರಾಜ್ಯದಲ್ಲಿ ನೇಮಕವಾಗುವ ಹುದ್ದೆಗಳಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವ ಔಚಿತ್ಯವಾದರೂ ಏನು? ಈ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಬಹುದಲ್ಲವೇ’ ಎಂದು ನೂರಾರು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.

‘ಕನ್ನಡ ಭಾಷೆಯಲ್ಲೇ ಪರೀಕ್ಷೆ ನಡೆಸಿದರೆ ಆಯ್ಕೆಯಾಗುವ ಕನ್ನಡಿಗರ ಸಂಖ್ಯೆ ಹೆಚ್ಚಾಗಲಿದೆ. ರಾಜ್ಯದಲ್ಲಿ ನೇಮಕವಾಗುವ ಈ ಹುದ್ದೆಗಳಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುವುದು ಯಾವ ನ್ಯಾಯ? ಕನ್ನಡಿಗರು ಭಾರತ ಒಕ್ಕೂಟದಲ್ಲಿ ಎರಡನೇ ದರ್ಜೆ ನಾಗರಿಕರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು ಕನ್ನಡ ಗ್ರಾಹಕರ ಕೂಟದ ಅಭಿಯಾನಗಳು ಮತ್ತು ಭಾರತದಲ್ಲಿ ಕನ್ನಡಕ್ಕೆ ಆಡಳಿತಭಾಷೆ ಕೊಡಬೇಕೆನ್ನುವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮೂರು ತಿಂಗಳಲ್ಲಿ ನೇಮಕಾತಿ ಪರೀಕ್ಷೆ ನಡೆಯಲಿದ್ದು ಕನ್ನಡ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲೇ ಪರೀಕ್ಷೆ ಬರೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ನೂರಾರು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.