#MeToo ಸಾರ್ವಜನಿಕ ವಿಚಾರಣೆಗೆ ಸಮಿತಿ ರಚನೆ

0
360

ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಮಿ ಟೂ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂತಹ ಪ್ರಕರಣಗಳ ಸಾರ್ವಜನಿಕ ವಿಚಾರಣೆಗಾಗಿ ನಾಲ್ವರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಲಿದೆ.

ಹೊಸದಿಲ್ಲಿ: ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಮಿ ಟೂ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ಇಂತಹ ಪ್ರಕರಣಗಳ ಸಾರ್ವಜನಿಕ ವಿಚಾರಣೆಗಾಗಿ ನಾಲ್ವರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಲಿದೆ. 

ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ.

ಇಂತಹ ದೂರಿನ ಹಿಂದೆ ಇರುವಂತಹ ನೋವು ಮತ್ತು ಒತ್ತಡವನ್ನು ನಾನು ಅರಿತಿದ್ದೇನೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ‘ಶೂನ್ಯ ಸಹನೆ’ ನೀತಿಯೊಂದಿಗೆ ವ್ಯವಹರಿಸಬೇಕು. ಮುಕ್ತ ಮತ್ತು ಸ್ವತಂತ್ರ ರೀತಿಯಲ್ಲಿ ಈ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಸಂತ್ರಸ್ತೆಯರಿಗೆ ಸಲಹೆ ನೀಡಲು ನಾಲ್ವರು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ಮೇನಕಾ ಮಾಹಿತಿ ನೀಡಿದ್ದಾರೆ. 

ಉನ್ನತ ಅಧಿಕಾರದಲ್ಲಿರುವ ಪುರುಷರು ಇಂತಹ ಕೃತ್ಯಗಳನ್ನು ಎಸಗುತ್ತಾರೆ. ಮಾಧ್ಯಮ, ರಾಜಕೀಯ, ಸಿನಿಮಾ ಅಥವಾ ಕಚೇರಿಗಳ ಹಿರಿಯ ಅಧಿಕಾರಿಗಳಿಗೂ ಇದು ಅನ್ವಯಿಸುತ್ತದೆ. ಮಹಿಳೆಯರು ತಾವು ಅಪಹಾಸ್ಯಕ್ಕೆ ಗುರಿಯಾಗುವ ಅಥವಾ ತಮ್ಮ ಚಾರಿತ್ರ್ಯದ ಬಗ್ಗೆ ಶಂಕೆಗೆ ಗುರಿಯಾಗುವ ಭೀತಿಯಿಂದ ಬಹಿರಂಗವಾಗಿ ಈ ಬಗ್ಗೆ ಮಾನತಾಡಲು ಹೆದರುತ್ತಾರೆ. ಈಗ ಈ ವಿಷಯವನ್ನು ಬಯಲು ಮಾಡಿದ ಬಳಿಕ, ಪ್ರತಿಯೊಂದು ಆರೋಪದಲ್ಲೂ ಕ್ರಮ ಜರುಗಿಸಲೇಬೇಕು ಎಂದು ಹೇಳಿದ್ದಾರೆ. 

ದೂರು ದಾಖಲಿಗೆ ಸೂಚನೆ: 
ಸಂತ್ರಸ್ತೆಯರು ನೀಡುವ ದೂರು ಎಷ್ಟೇ ಹಳೆಯದಾಗಿದ್ದರೂ, ಯಾವುದೇ ಕಾಲಮಿತಿ ಇಲ್ಲದೆ ಅದನ್ನು ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸುವಂತೆ ಕಾನೂನು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಹೀಗಾಗಿ 10-15 ವರ್ಷ ಹಳೆಯ ಪ್ರಕರಣಗಳಲ್ಲೂ ದೂರು ದಾಖಲಿಸಬಹುದು ಎಂದು ಅವರು ಸಂತ್ರಸ್ತೆಯರಿಗೆ ಅಭಯ ನೀಡಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಸಚಿವ ಎಂ.ಜೆ. ಅಕ್ಬರ್‌ ಅವರು ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿ, ರಾಜೀನಾಮೆ ಒತ್ತಡಕ್ಕೆ ಸಿಲುಕಿರುವ ನಡುವೆಯೇ, ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಿದೆ.