Indian Army Day 2019: 71ನೇ ಸೇನಾ ದಿನಾಚರಣೆ, ಹುತಾತ್ಮ ಯೋಧರಿಗೆ ದೇಶದ ನಮನ

0
703

ದೇಶವನ್ನು ರಕ್ಷಿಸಲು ತಮ್ಮ ಜೀವ, ಜೀವನವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜನವರಿ 15 ನ್ನು ರಾಷ್ಟ್ರೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ

ಹೊಸದಿಲ್ಲಿ: ದೇಶವನ್ನು ರಕ್ಷಿಸಲು ತಮ್ಮ ಜೀವ, ಜೀವನವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜನವರಿ 15ನ್ನು ರಾಷ್ಟ್ರೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಇಂದು 71ನೇ ಸೇನಾ ದಿನ. ಭಾರತದ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಯುದ್ದ, ನೈಸರ್ಗಿಕ ವಿಕೋಪಗಳಂಥ ಸನ್ನಿವೇಶಗಳೊಂದಿಗೆ ಹೋರಾಡಲು ಹಾಗೂ ಧೈರ್ಯದಿಂದ ಎಲ್ಲಾ ತೊಂದರೆ, ಸವಾಲುಗಳನ್ನು ಎದುರಿಸಿ ರಾಷ್ಟ್ರ ಹಾಗೂ ರಾಷ್ಟ್ರದ ಜನರನ್ನು ಉಳಿಸಲು ಸದಾ ಸಿದ್ಧರಾಗಿರುತ್ತಾರೆ. ಸೈನ್ಯವು ನಿಜವಾದ ಸಮರ್ಪಣೆ ಮತ್ತು ‘ಗೆಲ್ಲಲೆಂದೇ ಹೋರಾಟ’ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತದೆ. 

1949ರ ಜನವರಿ 15ರಂದು ಭಾರತದ ಪ್ರಥಮ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಭಾರತೀಯ ಸೇನಾಪಡೆಯ ಮೊದಲ ಕಮ್ಯಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ ಈ ದಿನವನ್ನು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. 

ಇಂಡಿಯಾ ಗೇಟ್‌ನಲ್ಲಿರುವ ಅಮರ್‌ ಜವಾನ್‌ ಜ್ಯೋತಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವುದರೊಂದಿಗೆ ಈ ದಿನದ ಆಚರಣೆ ಪ್ರಾರಂಭವಾಗುತ್ತದೆ. ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಿರುವವರು ಈ ದಿನದಲ್ಲಿ ದೇಶವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ದೆಹಲಿಯ ಕಂಟೋನ್ಮೆಂಟ್‌ನಲ್ಲಿ ಸೈನ್ಯದ ತಂತ್ರಜ್ಞಾನ ಮತ್ತು ಸಾಧನೆಗಳನ್ನು ಒಳಗೊಂಡಿರುವ ಪೆರೇಡ್‌ಗಳು ಮತ್ತು ಅನೇಕ ಸೇನಾ ಪ್ರದರ್ಶನಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಸೇನಾ ಪದಕಗಳನ್ನು ಸಹ ನೀಡಲಾಗುತ್ತದೆ. 

ಈ ಶುಭ ಸಂದರ್ಭದಲ್ಲಿ ಭಾರತೀಯ ಸೇನೆಗೆ ಶುಭಾಶಯ ಕೋರಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ತವ್ಯ ನಿರ್ವಹಿಸುತ್ತ ಹುತಾತ್ಮರಾದ ಯೋಧರನ್ನು ಸ್ಮರಿಸಿದ್ದಾರೆ.