99ನೇ ಪ್ರಶಸ್ತಿ ಗೆದ್ದ “ರೋಜರ್ ಫೆಡರರ್”

0
703

ವಿಶ್ವ ನಂ.3 ಆಟಗಾರ, 37 ವರ್ಷದ ಸ್ವಿಜರ್ಲೆಂಡ್​ನ ದಿಗ್ಗಜ ರೋಜರ್ ಫೆಡರರ್ 99ನೇ ಎಟಿಪಿ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ಮುಕ್ತಾಯಗೊಂಡ ಸ್ವಿಸ್ ಇಂಡೋರ್ಸ್ ಬಾಸೆಲ್ ಟೂರ್ನಿಯಲ್ಲಿ ತವರಿನ ಪ್ರೇಕ್ಷಕರ ಎದುರಿನಲ್ಲಿಯೇ ಫೆಡರರ್ ದಾಖಲೆಯ 9ನೇ ಬಾರಿಗೆ ಪ್ರಶಸ್ತಿ ಜಯಿಸಿದರು.

ಬಾಸೆಲ್: ವಿಶ್ವ ನಂ.3 ಆಟಗಾರ, 37 ವರ್ಷದ ಸ್ವಿಜರ್ಲೆಂಡ್​ನ ದಿಗ್ಗಜ ರೋಜರ್ ಫೆಡರರ್ 99ನೇ ಎಟಿಪಿ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ಮುಕ್ತಾಯಗೊಂಡ ಸ್ವಿಸ್ ಇಂಡೋರ್ಸ್ ಬಾಸೆಲ್ ಟೂರ್ನಿಯಲ್ಲಿ ತವರಿನ ಪ್ರೇಕ್ಷಕರ ಎದುರಿನಲ್ಲಿಯೇ ಫೆಡರರ್ ದಾಖಲೆಯ 9ನೇ ಬಾರಿಗೆ ಪ್ರಶಸ್ತಿ ಜಯಿಸಿದರು.

ಚಿಕ್ಕಂದಿನಲ್ಲಿ ಬಾಸೆಲ್ ಟೂರ್ನಿಯಲ್ಲಿ ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸಿದ್ದ ರೋಜರ್ ಫೆಡರರ್ ಫೈನಲ್ ಪಂದ್ಯದಲ್ಲಿ 7-6 (5), 6-4 ರಿಂದ ಅರ್ಹತಾ ಸುತ್ತಿನಿಂದ ಬಂದ ಆಟಗಾರ ರೊಮೆನಿಯಾದ ಮಾರಿಯಸ್ ಕೊಪಿಲ್​ರನ್ನು ಸೋಲಿಸಿದರು. ಈ ಟೂರ್ನಿಯಲ್ಲಿ ಸತತ 20ನೇ ಪಂದ್ಯ ಗೆದ್ದ ಫೆಡರರ್, ಒಟ್ಟಾರೆ ಬಾಸೆಲ್ ಟೂರ್ನಿಯ ಗೆಲುವು ಸೋಲಿನ ಅಂತರವನ್ನು 71-9ಕ್ಕೇರಿಸಿದರು. ಎಟಿಪಿ ವರ್ಲ್ಡ್ ಟೂರ್ 500-ಮಟ್ಟದ ಟೂರ್ನಿಯನ್ನು ಸತತ ನಾಲ್ಕು ವರ್ಷ ಗೆದ್ದಿರುವ ದಿಗ್ಗಜ ಆಟಗಾರ, ತಾವು ಆಡಿದ ಕಳೆದ 12 ಆವೃತ್ತಿಯ ಟೂರ್ನಿಯಲ್ಲಿಯೂ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಗೆಲುವಿನಿಂದಾಗಿ 100 ಎಟಿಪಿ ಪ್ರಶಸ್ತಿ ದಾಖಲೆಗಳಿಂದ 1 ಪ್ರಶಸ್ತಿಯ ದೂರದಲ್ಲಿದ್ದಾರೆ. ಗರಿಷ್ಠ ಪ್ರಶಸ್ತಿ ಗೆದ್ದ ದಾಖಲೆ ಜಿಮ್ಮಿ ಕಾನರ್ಸ್ ಹೆಸರಿನಲ್ಲಿದೆ. ಅಮೆರಿಕದ ಆಟಗಾರ 109 ಎಟಿಪಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವುದು ಈವರೆಗೂ ದಾಖಲೆಯಾಗಿ ಉಳಿದುಕೊಂಡಿದೆ. ಇದು ಹಾಲಿ ಋತುವಿನಲ್ಲಿ ಫೆಡರರ್ ಗೆದ್ದ ನಾಲ್ಕನೇ ಪ್ರಶಸ್ತಿ. ಜೂನ್​ನಲ್ಲಿ ಸ್ಟುಟ್​ಗರ್ಟ್​ನಲ್ಲಿ ಗೆದ್ದ ಬಳಿಕ ಮೊದಲ ಚಾಂಪಿಯನ್ ಪಟ್ಟ. ಇದಕ್ಕೂ ಮುನ್ನ ವರ್ಷದ ಆರಂಭದ ಆಸ್ಟ್ರೇಲಿಯನ್ ಓಪನ್ ಹಾಗೂ ಆ ಬಳಿಕ ನಡೆದ ರೊಟೆರ್​ಡ್ಯಾಂ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

9-  ರೋಜರ್ ಫೆಡರರ್ ಬಾಸೆಲ್ ಟೂರ್ನಿ ಅಲ್ಲದೆ, ಗ್ಯಾರಿ ವೆಬ್ಬರ್ ಟೆನಿಸ್ ಟೂರ್ನಿಯನ್ನು ದಾಖಲೆಯ 9 ಬಾರಿಗೆ ಗೆದ್ದಿದ್ದಾರೆ. ಉಳಿದಂತೆ ವಿಂಬಲ್ಡನ್ (8 ಬಾರಿ), ವೆಸ್ಟರ್ನ್- ಸದರ್ನ್ ಓಪನ್ ಹಾಗೂ ದುಬೈ ಡ್ಯೂಟಿ ಫ್ರೀ ಟೆನಿಸ್ ಟೂರ್ನಿಯಲ್ಲಿ ತಲಾ 7 ಬಾರಿ ಜಯಿಸಿದ್ದಾರೆ.