7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ : ಬೆಂಗಾಲ್ ವಾರಿಯರ್ಸ್​ಗೆ ಕಿರೀಟ

0
24

ಬೆಂಗಾಲ್ ವಾರಿಯರ್ಸ್ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಮೊದಲ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿತು.

ಆರಂಭಿಕ ಹಿನ್ನಡೆ ನಡುವೆಯೂ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಲು ಯಶಸ್ವಿಯಾದ ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದ ಬೆಂಗಾಲ್ ವಾರಿಯರ್ಸ್ ತಂಡ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಮೊದಲ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿತು. ಟ್ರ್ಯಾನ್ಸ್ ಸ್ಟೇಡಿಯಾದಲ್ಲಿ ಅಕ್ಟೋಬರ್ 19 ರ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬೆಂಗಾಲ್ ತಂಡ 39-34 ಅಂಕಗಳಿಂದ ದಬಾಂಗ್ ದೆಹಲಿ ತಂಡವನ್ನು ಸೋಲಿಸಿತು. ಇದರೊಂದಿಗೆ ಲೀಗ್​ನಲ್ಲಿ ಫೈನಲ್​ಗೇರಿದ ಮೊದಲ ಯತ್ನದಲ್ಲೇ ಬೆಂಗಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮತ್ತೊಂದೆಡೆ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ದೆಹಲಿ ನಿರಾಸೆ ಅನುಭವಿಸಿತು. ನಾಯಕ ಮಣಿಂದರ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಾಲ್ ತಂಡ ಪಂದ್ಯದ ಆರಂಭಿಕ ನಿಮಿಷಗಳಲ್ಲಿ ದೆಹಲಿ ತಂಡಕ್ಕೆ ಭಾರಿ ಮುನ್ನಡೆ ಬಿಟ್ಟುಕೊಟ್ಟರೂ ತಿರುಗೇಟು ನೀಡುವ ಮೂಲಕ ಸಮಬಲ ಸಾಧಿಸಲು ಯಶಸ್ವಿಯಾಯಿತು. ಮೊದಲಾರ್ಧದಲ್ಲಿ ಉಭಯ ತಂಡಗಳು 17- 17 ಅಂಕಗಳಿಂದ ಸಮಬಲ ಸಾಧಿಸಿದ್ದವು.

ನವೀನ್ ಹೋರಾಟ ವ್ಯರ್ಥ

ಪಂದ್ಯ ಸಾಗುತ್ತಿದ್ದಂತೆ ಬಿಗಿ ಹಿಡಿತ ಕಾಯ್ದುಕೊಂಡ ಬೆಂಗಾಲ್ ತಂಡ 27ನೇ ನಿಮಿಷದಲ್ಲಿ ದೆಹಲಿ ತಂಡವನ್ನು 2ನೇ ಬಾರಿಗೆ ಆಲೌಟ್ ಮಾಡಿ 25-21ರಿಂದ ಮುನ್ನಡೆ ಕಂಡಿತು. ಬಳಿಕ 6 ನಿಮಿಷಗಳ ಅಂತರದಲ್ಲಿ ಮತ್ತೊಮ್ಮೆ ದೆಹಲಿ ತಂಡವನ್ನು ಆಲೌಟ್ ಮಾಡಿದ ಬೆಂಗಾಲ್ 36-28ರಿಂದ ಮುನ್ನಡೆ ಗಳಿಸಿ ಗೆಲುವು ಖಚಿತಪಡಿಸಿಕೊಂಡಿತು. ಟೂರ್ನಿ ಯುದ್ದಕ್ಕೂ ದೆಹಲಿ ಪಾಲಿಗೆ ರೈಡಿಂಗ್ ಮೆಷಿನ್​ನಂತಿದ್ದ ನವೀನ್ ಕುಮಾರ್ (18) ಅಂತಿಮ ಕ್ಷಣದವರೆಗೂ ತಂಡದ ಗೆಲುವಿಗೆ ಹೋರಾಡಿದರು. ಕನ್ನಡಿಗ ಸುಖೇಶ್ ಹೆಗ್ಡೆ ಅನುಭವಿ ನಿರ್ವಹಣೆಯೊಂದಿಗೆ ಯಾವುದೇ ಅಪಾಯವಾಗದಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬೆಂಗಾಲ್ ವಾರಿಯರ್ಸ್ ಕೋಚ್ ಬಿಸಿ ರಮೇಶ್​ಗೆ ಇದು ವೈಯಕ್ತಿಕವಾಗಿ ಸತತ ಎರಡನೇ ಪ್ರಶಸ್ತಿಯಾಗಿದೆ. ಕಳೆದ ಬಾರಿಗೆ ಇವರ ಮಾರ್ಗದರ್ಶನದಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿತ್ತು.

# ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡ 3 ಕೋಟಿ ರೂ. ಮತ್ತು ರನ್ನರ್​ಅಪ್ ದಬಾಂಗ್ ದೆಹಲಿ ತಂಡ 1.8 ಕೋಟಿ ರೂ. ಪಡೆಯಿತು.

# ಬೆಸ್ಟ್ ರೈಡರ್: ಪವನ್ ಶೇರಾವತ್ (ಬೆಂಗಳೂರು)

# ಬೆಸ್ಟ್ ಡಿಫೆಂಡರ್: ಫಜಲ್ ಅತ್ರಾಚಲಿ (ಮುಂಬೈ)

# ಅಮೂಲ್ಯ ಆಟಗಾರ: ನವೀನ್ ಕುಮಾರ್ (ದೆಹಲಿ)

# ಫೈನಲ್ ಪಂದ್ಯದ ಬೆಸ್ಟ್ ರೈಡರ್: ನವೀನ್ ಕುಮಾರ್ (ದೆಹಲಿ)

# ಫೈನಲ್ ಬೆಸ್ಟ್ ಡಿಫೆಂಡರ್: ಜೀವಕುಮಾರ್ (ಬೆಂಗಾಲ್ ವಾರಿಯರ್ಸ್)