600 ಕೋಟಿ ರೂ.ಗಳ ಪೊಂಝಿ ಸ್ಕೀಂ ವಂಚನೆ ಹಗರಣ: ಜನಾರ್ದನ ರೆಡ್ಡಿ ಬಂಧನ

0
479

ಆ್ಯಂಬಿಡೆಂಟ್ ಸ್ಕೀಂ ವಂಚನೆ ಮತ್ತು 57 ಕೆಜಿ ಚಿನ್ನದ ಗಟ್ಟಿ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು: ಆ್ಯಂಬಿಡೆಂಟ್ ಸ್ಕೀಂ ವಂಚನೆ ಮತ್ತು 57 ಕೆಜಿ ಚಿನ್ನದ ಗಟ್ಟಿ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ ನಂತರ ಜಡ್ಜ್‌ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಸಿಸಿಬಿ ಪೊಲೀಸರ ಮನವಿಯಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು. ನವೆಂಬರ್‌ 24ರವರೆಗೆ ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಅಕ್ರಮ ಹಣ ವರ್ಗಾವಣೆ, ಸಾಕ್ಷ್ಯನಾಶ ಮತ್ತು ವಂಚನೆಗೆ ಸಹಕಾರ ಬಗ್ಗೆ ಮಾಜಿ ಸಚಿವ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. 

 ಜನಾರ್ದನ ರೆಡ್ಡಿ  ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ರೆಡ್ಡಿ, ಶನಿವಾರ ವಕೀಲರ ಜತೆಗೆ ಸಿಸಿಬಿ ಕಚೇರಿಗೆ ಹಾಜರಾಗಿದ್ದರು. ಶನಿವಾರ ರಾತ್ರಿ ಮತ್ತು ಭಾನುವಾರ ಕೂಡ ರೆಡ್ಡಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. 

ರೆಡ್ಡಿ ಜತೆಗೆ ಅವರ ಸಹಚರ ಮೆಫುಜ್ ಅಲಿ ಖಾನ್‌ನನ್ನು ಕೂಡ ಸಿಸಿಬಿ ಪೊಲೀಸರು ಬಂಧಿಸಿದ್ದು, ಭಾನುವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. 

ಸಾಕ್ಷಿಗಳ ಹೇಳಿಕೆ ಮತ್ತು ಕೆಲವೊಂದು ದಾಖಲೆಗಳ ಆಧಾರದಲ್ಲಿ ರೆಡ್ಡಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ವಿಚಾರಣೆಗೆ ಇದರಿಂದ ಅನುಕೂಲವಾಗಲಿದೆ. ಮ್ಯಾಜಿಸ್ಟ್ರೇಟ್ ಮುಂದೆ ರೆಡ್ಡಿಯನ್ನು ಹಾಜರುಪಡಿಸುತ್ತೇವೆ. ಪೊಂಝಿ ಹಗರಣದಲ್ಲಿ 600 ಕೋಟಿ ರೂ. ಮೊತ್ತ ವಂಚಿಸಿರುವ ಸಾಧ್ಯತೆಯಿದ್ದು, ಅದನ್ನು ವಶಪಡಿಸಿಕೊಂಡು, ಹೂಡಿಕೆದಾರರಿಗೆ ಹಿಂದಿರುಗಿಸುತ್ತೇವೆ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. 

ರೆಡ್ಡಿಗೆ ನ್ಯಾಯಾಂಗ ಬಂಧನ ಹಿನ್ನಲೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಧಿಕಾರಿಗಳ ಸಿದ್ದತೆ ನಡೆಸಿದ್ದಾರೆ. ಬಹುತೇಕ ಕ್ವಾರಟೈನ್ ಕೊಠಡಿಯೇ ಕಾಯಂ ಆಗುವ ನಿರೀಕ್ಷೆ ಇದೆ. 

ಈ‌ ಹಿಂದೆ ವಿಐಪಿಗಳಿದ್ದ ಕೊಠಡಿ ಹಾಗೂ ಒಂದು ಕಾಲದಲ್ಲಿ ಇದೇ ಜನಾರ್ದನ ರೆಡ್ಡಿ ಈ ಕೊಠಡಿಯಲ್ಲಿದ್ದರು. 

ಜೈಲಿನ ಆಸ್ಪತ್ರೆಗೆ ಹೊಂದಿಕೊಂಡಿರುವ ಬ್ಯಾರಕ್ ಇದಾಗಿದ್ದು, ಈ ಕೊಠಡಿಯಲ್ಲಿ ಎಲ್ಲಾ ರೀತಿಯ ಸವಲತ್ತುಗಳಿವೆ. ಟಿವಿ, ಮಂಚ ಮತ್ತು ಬಿಸಿ‌ ನೀರು ಸಿಗುತ್ತದೆ.