60 ಲಕ್ಷ ಶೌಚಾಲಯ ನಿರ್ಮಾಣ(ಸ್ವಚ್ಛ ಭಾರತ ಅಭಿಯಾನದಡಿ 4.7 ಲಕ್ಷ ಸಾರ್ವಜನಿಕ ಶೌಚಾಲಯ ) : ಕೇಂದ್ರ ಸರ್ಕಾರದ ವರದಿ

0
29

ಸ್ವಚ್ಛ ಭಾರತ ಅಭಿಯಾನದಡಿ ದೇಶದಾದ್ಯಂತ 60.5 ಲಕ್ಷ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. 66 ಲಕ್ಷ ಶೌಚಾಲಯ ನಿರ್ಮಾಣ ಉದ್ದೇಶವಿದ್ದು, ಈವರೆಗೆ ಶೇ 91ರಷ್ಟು ಗುರಿ ಸಾಧಿಸಲಾಗಿದೆ.

ನವದೆಹಲಿ (ಪಿಟಿಐ): ಸ್ವಚ್ಛ ಭಾರತ ಅಭಿಯಾನದಡಿ ದೇಶದಾದ್ಯಂತ 60.5 ಲಕ್ಷ ಮನೆಗಳಲ್ಲಿ  ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. 66 ಲಕ್ಷ ಶೌಚಾಲಯ ನಿರ್ಮಾಣ ಉದ್ದೇಶವಿದ್ದು, ಈವರೆಗೆ ಶೇ 91ರಷ್ಟು ಗುರಿ ಸಾಧಿಸಲಾಗಿದೆ. 

ಅಭಿಯಾನದಡಿ 4.7 ಲಕ್ಷ ಸಾರ್ವಜನಿಕ ಶೌಚಾಲಯ ಕಟ್ಟಲಾಗಿದೆ. 5.07 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿತ್ತು ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯ ತಿಳಿಸಿದೆ.

ಚರಂಡಿ ಹಾಗೂ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಮಾರ್ಗಸೂಚಿಗಳನ್ನು ‘ಜಾಗತಿಕ ಶೌಚಾಲಯ ದಿನ’ದ ಅಂಗವಾಗಿ ಬಿಡುಗಡೆ ಮಾಡಲಾಯಿತು. 

 19 ರಾಜ್ಯಗಳು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿವೆ ಎಂದು ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ತಿಳಿಸಿದ್ದಾರೆ. 

ಮೋದಿ ಶ್ಲಾಘನೆ: ಕಳೆದ ನಾಲ್ಕು ವರ್ಷಗಳಲ್ಲಿ ನೈರ್ಮಲ್ಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಈ ಬಗ್ಗೆ ಸರ್ಕಾರಕ್ಕೆ ಇರುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 

ಸ್ವಚ್ಛ ಭಾರತ ಹಾಗೂ ನೈರ್ಮಲ್ಯ ಸೌಲಭ್ಯಗಳ ಹೆಚ್ಚಳ ನಿಜಕ್ಕೂ ಜನರ ಅಭಿಯಾನದ ಫಲ ಎಂದು ಅವರು ಹೇಳಿದರು. ದೇಶದ ಮಹಿಳೆಯರು ಹಾಗೂ ಯುವಕರು ಇದರ ಮುಂದಾಳತ್ವ ವಹಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಅವರು ಪ್ರಶಂಸಿಸಿದ್ದಾರೆ. ಸ್ವಚ್ಛ ಭಾರತ ಸಾಕಾರಗೊಳ್ಳಲು ಕಾರಣರಾದ ಎಲ್ಲರಿಗೂ ಮೋದಿ ಅವರು ಅವರು ಅಭಿನಂದನೆ ಸಲ್ಲಿಸಿದ್ದಾರೆ. 

ಸರಳ ಶೌಚ ಸಾಧನ:

ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ವಿದ್ಯಾರ್ಥಿಗಳು ಮಹಿಳೆಯರಿಗಾಗಿ ‘ಸ್ಟ್ಯಾಂಡ್ ಅಂಡ್ ಪೀ’ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಸನ್‌ಫೇ (ಸ್ಯಾನಿಟೇಷನ್ ಫಾರ್ ವಿಮೆನ್) ಹೆಸರಿನ ಈ ಸಾಧನವನ್ನು  ಜಾಗತಿಕ ಶೌಚಾಲಯ ದಿನದ ನಿಮಿತ್ತ ಬಿಡುಗಡೆ ಮಾಡಲಾಯಿತು. 

ನೈರ್ಮಲ್ಯ ಕೊರತೆಯಿರುವ, ಕೊಳಕು ಸ್ಥಿತಿಯ ಸಾರ್ವಜನಿಕ ಶೌಚಾಲಯಗಳಿಗೆ ಹೋಗುವ ಅನಿವಾರ್ಯತೆ ಇಲ್ಲ. ಕೇವಲ 10 ಬೆಲೆಯ ಈ ಸಾಧನವನ್ನು ಏಮ್ಸ್‌ನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ದೇಶದಾದ್ಯಂತ 1 ಲಕ್ಷ ಸ್ಯಾಂಪಲ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ.