5,350 ನವೋದ್ಯಮ ನೆರವಿಗೆ ಅರ್ಹ

0
13

‘ಸ್ಟಾರ್ಟ್‌ಅಪ್‌ ಇಂಡಿಯಾ’ ಕಾರ್ಯಕ್ರಮದಡಿ ನೆರವು ನೀಡಲು ಇದುವರೆಗೆ 5,350 ನವೋದ್ಯಮಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಉತ್ತೇಜನಾ ಕಾರ್ಯಕ್ರಮದ ಪ್ರಯೋಜನ ಒದಗಿಸಲು ಕೈಗಾರಿಕಾ ನೀತಿ ಮತ್ತು ಉತ್ತೇಜನಾ  ಇಲಾಖೆಯು (ಡಿಐಪಿಪಿ) ಈ ನವೋದ್ಯಮಗಳನ್ನು ಗುರುತಿಸಿದೆ. ಸ್ಟಾರ್ಟ್‌ಅಪ್‌ಗಳ ಬಳಕೆಗೆ ಸ್ಥಾಪಿಸಿರುವ ‘ನಿಧಿಗಳ ನಿಧಿ’ಯಡಿ 75 ನವೋದ್ಯಮಗಳು ಇದುವರೆಗೆ ₹ 337 ಕೋಟಿಗಳ ನೆರವು ಪಡೆದಿವೆ. ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯ್ತಿ ಪಡೆಯಲು 74 ನವೋದ್ಯಮಗಳನ್ನು ಗುರುತಿಸಲಾಗಿದೆ. ‘ಡಿಐಪಿಪಿ’ ಪರಿಗಣಿಸಿರುವ 5,350 ನವೋದ್ಯಮಗಳಲ್ಲಿ 40 ಸಾವಿರ ತಂತ್ರಜ್ಞರು ದುಡಿಯುತ್ತಿದ್ದಾರೆ.

ನವೋದ್ಯಮಗಳ ಕುರಿತ ಎಲ್ಲ ಸಂದೇಹಗಳನ್ನು ನಿವಾರಿಸಲು ಮತ್ತು ಅಗತ್ಯ ನೆರವು ನೀಡಲು ಸ್ಥಾಪಿಸಿರುವ ‘ಸ್ಟಾರ್ಟ್‌ಅಪ್‌ ಇಂಡಿಯಾ ಹಬ್‌’, ಉತ್ಸಾಹಿ ನವೋದ್ಯಮಿಗಳ ಎಲ್ಲ ಅನುಮಾನಗಳನ್ನು ಬಗೆಹರಿಸಲು ನೆರವಾಗುತ್ತಿದೆ. ಪರಸ್ಪರ ಮಾಹಿತಿ ವಿನಿಮಯಕ್ಕೂ ಇದು ಸಹಕಾರಿಯಾಗಿದೆ. ಈ ಕೇಂದ್ರವು 75,643 ಪ್ರಶ್ನೆಗಳಿಗೆ ಉತ್ತರ ನೀಡಿದೆ. ಸ್ಟಾರ್ಟ್‌ಅಪ್‌ ಸ್ಥಾಪನೆ, ನೆರವು ಕೇಂದ್ರಗಳು, ಬಂಡವಾಳ ಸಂಗ್ರಹ ಮತ್ತಿತರ ಸಂಗತಿಗಳ ಬಗ್ಗೆ ನವೋದ್ಯಮಿಗಳ ಅನುಮಾನಗಳನ್ನು ದೂರ ಮಾಡಲು ಇದು ಉಪಯೋಗಕ್ಕೆ ಬರುತ್ತಿದೆ.

ಸ್ಟಾರ್ಟ್‌ಅಪ್‌ಗಳಿಗಾಗಿಯೇ ಸ್ಥಾಪಿಸಿರುವ ನಿಧಿಯಡಿ  ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ಗೆ (ಎಸ್‌ಐಡಿಬಿಐ) 2015–16ರಲ್ಲಿ ₹ 500 ಕೋಟಿ ಮತ್ತು 2016–17ರಲ್ಲಿ ₹ 100 ಕೋಟಿ ಬಿಡುಗಡೆ ಮಾಡಲಾಗಿದೆ.