5 ತಿಂಗಳಲ್ಲಿ 283 ರೈತರ ಆತ್ಮಹತ್ಯೆ: ರಾಜ್ಯದ ಅನ್ನದಾತರ ಸ್ಥಿತಿ ದಾರುಣ

0
358

ಏಪ್ರಿಲ್ 1ರಿಂದ ಆಗಸ್ಟ್‌ 31ರ ವರೆಗೆ ಐದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿ 12 ಗಂಟೆಗೆ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ನಾನಾ ಕ್ರಮಗಳನ್ನು ಕೈಗೊಂಡರೂ ಅನ್ನದಾತರ ಆತ್ಮಹತ್ಯೆ ಪ್ರಮಾಣ ಮಾತ್ರ ಏರುತ್ತಲೇ ಇದೆ.

ಬೆಂಗಳೂರು: ಏಪ್ರಿಲ್ 1ರಿಂದ ಆಗಸ್ಟ್‌ 31ರ ವರೆಗೆ ಐದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿ 12 ಗಂಟೆಗೆ ಒಬ್ಬರಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ನಾನಾ ಕ್ರಮಗಳನ್ನು ಕೈಗೊಂಡರೂ ಅನ್ನದಾತರ ಆತ್ಮಹತ್ಯೆ ಪ್ರಮಾಣ ಮಾತ್ರ ಏರುತ್ತಲೇ ಇದೆ. 

ಬೆಂಗಳೂರು ನಗರ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ವರದಿಗಳು ಬಂದಿವೆ. 

ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಈ ಅವಧಿಯಲ್ಲಿ 283 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ  ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಘಟನೆಗಳು ವರದಿಯಾಗಿವೆ. 

ಜೂನ್‌ ತಿಂಗಳಲ್ಲಿ ಅತ್ಯಧಿಕ, ಮೇ ತಿಂಗಳಲ್ಲಿ ಸ್ವಲ್ಪ ಕಡಿಮೆ ಹಾಗೂ ಆಗಸ್ಟ್‌ನಲ್ಲಿ ಅತಿ ಕಡಿಮೆ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಸೆಪ್ಟೆಂಬರ್‌ ತಿಂಗಳ ಅಂಕಿ-ಅಂಶ ಮಾಸಾಂತ್ಯಕ್ಕೆ ಲಭ್ಯವಾಗಲಿದೆ. ರೈತರ ಸಾಲಮನ್ನಾ ಕ್ರಮವನ್ನು ಸ್ವಾಗತಿಸಿರುವ ರೈತ ಮುಖಂಡರು, ಬರೀ ಸಾಲಮನ್ನಾ ಅಷ್ಟೇ ಸಾಲದು, ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

2017ರ ಡಿಸೆಂಬರ್‌ 31ರ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ರೈತರ ಒಟ್ಟು ಸಾಲದ ಪ್ರಮಾಣ 201718ರ ಸಾಲಿನ ಕರ್ನಾಟಕದ ಒಟ್ಟು ರಾಜ್ಯ ಉತ್ಪನ್ನದ ಶೇ 10ರಷ್ಟು ಹಾಗೂ 2018-19ರ ಬಜೆಟ್‌ನ ಶೇ 57ರಷ್ಟಿದೆ. ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯಿಂದ (ಎಸ್‌ಎಲ್‌ಬಿಸಿ) ಪಡೆದ ಅಂಕಿ-ಅಂಶಗಳ ಪ್ರಕಾರ, 45 ಬ್ಯಾಂಕುಗಳಲ್ಲಿರುವ 85 ಲಕ್ಷ ರೈತರ ಒಟ್ಟು ಸಾಲದ ಪ್ರಮಾಣ 1.2 ಲಕ್ಷ ಕೋಟಿ ರೂ.ಗಳಷ್ಟಾಗಿದೆ. 

ಬೆಳಗಾವಿಯಲ್ಲಿ 34, ವಿಜಯಪುರ 21, ಕಲಬುರಗಿ 19, ಹಾವೇರಿ 18, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 17 ರೈತರು ಈ ಐದು ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.