4 ಲಕ್ಷ ಪೊಲೀಸ್ ಹುದ್ದೆ ಖಾಲಿ

0
16

ಪೊಲೀಸ್ ಇಲಾಖೆಯಲ್ಲಿ ದೇಶದಾದ್ಯಂತ 4.43 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಅಹಿರ್ ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದರು. ‘ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ಸಲ್ಲಿಸಿದ ಮಾಹಿತಿ ಪ್ರಕಾರ, 2017 ಜನವರಿ 1ಕ್ಕೆ ದೇಶದಾದ್ಯಂತ 4,43,524 ಪೊಲೀಸ್ ಹುದ್ದೆಗಳು ಖಾಲಿ ಇವೆ’ ಎಂದು ಸಚಿವರು ತಿಳಿಸಿದರು.

ಐಎಎಸ್ ಅಧಿಕಾರಿಗಳ ಕೊರತೆ: ‘ದೇಶದಲ್ಲಿ ಒಟ್ಟು 1,496 ಐಎಎಸ್ ಅಧಿಕಾರಿಗಳ ಕೊರತೆ ಇದೆ’ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ಕಳೆದ 6 ವರ್ಷಗಳಿಂದ ಐಎಎಸ್ ಅಧಿಕಾರಿಗಳ ನೇರ ನೇಮಕಾತಿ ಪ್ರಮಾಣವನ್ನು ವಾರ್ಷಿಕ 180ಕ್ಕೆ ಏರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗಣ್ಯರಿಗೆ ಭದ್ರತೆ: ‘ರೈಲಿನಲ್ಲಿ ಪ್ರಯಾಣಿಸುವ ಗಣ್ಯ ವ್ಯಕ್ತಿಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇಲಾಖೆಯು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾಜೇನ್ ಗೊಹೇನ್ ಲೋಕಸಭೆಗೆ ತಿಳಿಸಿದ್ದಾರೆ.

‘ಗಣ್ಯ ವ್ಯಕ್ತಿಗಳ ಆಸನದ ಹತ್ತಿರವೇ ಅವರ ಅಂಗರಕ್ಷಕರಿಗೆ ಆಸನಗಳನ್ನು ನೀಡದಿರುವುದರಿಂದ ಎದುರಾಗುತ್ತಿರುವ ಭದ್ರತಾ ಸಮಸ್ಯೆ ಕುರಿತು ಇಲಾಖೆ ಗಮನ ಹರಿಸಿದೆಯೇ’ ಎಂದು ಒಡಿಶಾದ ಸಂಸದ ಪ್ರಭಾಸ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ಈ ಸಮಸ್ಯೆ ನಿವಾರಿಸುವ ಸಂಬಂಧ ಈಗಾಗಲೇ ಸೂಚನೆ ಹೊರಡಿಸಲಾಗಿದೆ’ ಎಂದು ಸಚಿವರು ತಿಳಿಸಿದರು.

ಒಗೆದ ಬೆಟ್‌ಶೀಟ್‌, ಟವೆಲ್‌ ಪೂರೈಕೆ: ರೈಲಿನ ಸ್ಲೀಪರ್ ಬೋಗಿಗಳಲ್ಲಿ ಮಲಗಲು ಅನುವಾಗುವಂತೆ ಪ್ರಯಾಣಿಕರಿಗೆ ನೀಡಲಾಗುವ ಪರಿಕರಗಳಲ್ಲಿ ಕಂಬಳಿಯೊಂದನ್ನು ಹೊರತುಪಡಿಸಿ ಉಳಿದೆಲ್ಲವನ್ನು ಪ್ರತಿ ಬಳಕೆಯ ನಂತರವೂ ಶುಭ್ರಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಲೋಕಸಭೆಯಲ್ಲಿ ಖಾತರಿಪಡಿಸಿದೆ.

‘ಒಗೆದ ಬೆಡ್‌ಶೀಟ್‌, ದಿಂಬಿನ ಕವರ್‌ ಮತ್ತು ಟವೆಲ್‌ಗಳನ್ನೇ ಪ್ರಯಾಣಿಕರಿಗೆ ಪೂರೈಸಲಾಗುತ್ತದೆ. ಕಂಬಳಿಗಳನ್ನು ಕನಿಷ್ಠ ಎರಡು ತಿಂಗಳಿಗೆ ಒಮ್ಮೆ ಶುಚಿಗೊಳಿಸಲಾಗುತ್ತದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವರು ತಿಳಿಸಿದರು.

‘ಶೇ 65ಕ್ಕೂ ಹೆಚ್ಚು ಪ್ರಮಾಣದ ಬಟ್ಟೆಗಳನ್ನು ಇಲಾಖೆಯ ಯಾಂತ್ರೀಕೃತ ಲಾಂಡ್ರಿಗಳಲ್ಲಿ ಒಗೆಯಲಾಗುತ್ತದೆ. ಉಳಿದವುಗಳನ್ನು ಬಾಡಿಗೆ ಲಾಂಡ್ರಿಗಳಲ್ಲಿ ಒಗೆಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಬಳಕೆಯ ನಂತ ರವೂ ಇಂತಹ ಪರಿಕರಗಳನ್ನು ಶುಭ್ರಗೊಳಿಸಬೇಕು ಎಂಬ ನಿಯಮವನ್ನು ರೈಲ್ವೆಯ ವಿವಿಧ ವಲಯಗಳು ಪಾಲಿಸುತ್ತಿಲ್ಲ ಎಂದು ಮಹಾಲೇಖಪಾಲರು ಕಳೆದ ವರ್ಷ ವರದಿಯಲ್ಲಿ ತಿಳಿಸಿದ್ದರು.