370 ವಿಧಿ ರದ್ದು ಪ್ರಶ್ನಿಸಿ ‘ಸುಪ್ರೀಂ’ ಮೊರೆ : ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷ

0
38

ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷ ಆಗಸ್ಟ್ 10 ರ ಶನಿವಾರ ಸುಪ್ರೀಂ ಕೋರ್ಟ್ ಮೊರೆಹೋಗಿದೆ.

ನವದೆಹಲಿ (ಪಿಟಿಐ): ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷ ಆಗಸ್ಟ್ 10 ರ ಶನಿವಾರ ಸುಪ್ರೀಂ ಕೋರ್ಟ್ ಮೊರೆಹೋಗಿದೆ.

ಕಾಶ್ಮೀರ ವಿಚಾರದಲ್ಲಿ ಸಂಸತ್ತು ನೀಡಿದ ಅಂಗೀಕಾರ ಹಾಗೂ ಅದಕ್ಕೆ ರಾಷ್ಟ್ರಪತಿ ಸಹಿ ಹಾಕಿದ ಆದೇಶವು ‘ಅಸಾಂವಿಧಾನಿಕ’ ಎಂದು ಆರೋಪಿಸಿರುವ ಪಕ್ಷ, ಕೇಂದ್ರದ ನಿರ್ಧಾರವನ್ನು ಅನೂರ್ಜಿತಗೊಳಿಸಬೇಕು ಎಂದು ಆಗ್ರಹಿಸಿದೆ. 

ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಲೋಕಸಭಾ ಸದಸ್ಯರಾದ ಮೊಹಮ್ಮದ್ ಅಕ್ಬರ್ ಲೊನ್ ಮತ್ತು ನಿವೃತ್ತ ನ್ಯಾಯಮೂರ್ತಿ ಹಸನೈನ್ ಮಸೂದ್ ಅವರು ಅರ್ಜಿ ಸಲ್ಲಿಸಿದ್ದಾರೆ. ಲೊನ್ ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಆಗಿಯೂ ಕೆಲಸ ಮಾಡಿದ್ದಾರೆ. ಹಸನೈನ್ ಅವರು 2015ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದಾಗ, 370ನೇ ವಿಧಿಯು ಸಂವಿಧಾನದಲ್ಲಿ ಶಾಶ್ವತವಾಗಿರಲಿದೆ ಎಂದು ಆದೇಶ ಹೊರಡಿಸಿದ್ದರು. 

2019ರ ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡಣೆ ಕಾಯ್ದೆ’ ಹಾಗೂ ಈ ಕುರಿತ ರಾಷ್ಟ್ರಪತಿ ಆದೇಶವನ್ನು ಇಬ್ಬರು ಸಂಸದರು ಪ್ರಶ್ನಿಸಿದ್ದಾರೆ. ‘ಕಾಯ್ದೆ ಹಾಗೂ ರಾಷ್ಟ್ರಪತಿ ಆದೇಶವು ಕಾನೂನು ಬಾಹಿರ. ಅಷ್ಟೇ ಅಲ್ಲ, ಸಂವಿಧಾನವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳ (ಕಲಂ 14 ಮತ್ತು 21) ಉಲ್ಲಂಘನೆಯೂ ಆಗುತ್ತದೆ’ ಎಂದು ವಾದಿಸಿದ್ದಾರೆ. 

‘ಈ ಪ್ರಕರಣವು ಭಾರತದ ಒಕ್ಕೂಟ ವ್ಯವಸ್ಥೆ, ಪ್ರಜಾತಂತ್ರ ಪ್ರಕ್ರಿಯೆ ಹಾಗೂ ಸುಪ್ರೀಂ ಕೋರ್ಟ್‌ ನೀಡುವ ತೀರ್ಪುನ್ನು ಕುರಿತದ್ದಾಗಿರಲಿದೆ’ ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ. ವಕೀಲ ಮಹೇಶ್ ಬಾಬು ಎಂಬುವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. 

ನಿಷೇಧ ತೆರವಿಗೆ ಅರ್ಜಿ: ಜಮ್ಮು ಕಾಶ್ಮೀರದಲ್ಲಿ ಸಂವಹನ ಮಾಧ್ಯಮಗಳ ಮೇಲೆ ಹೇರಿರುವ ನಿಷೇಧ ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. 

ರಾಜ್ಯದಲ್ಲಿ ಮಾಧ್ಯಮಗಳ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗಲು ಮೊಬೈಲ್, ಇಂಟರ್‌ನೆಟ್, ಲ್ಯಾಂಡ್‌ ಲೈನ್ ಸೇವೆ ಪುನರಾರಂಭಿಸುವುದೂ ಸೇರಿದಂತೆ ಸಂವಹನ ಮಾಧ್ಯಮಗಳ ಮೇಲೆ ವಿಧಿಸಿರುವ ನಿಷೇಧಗಳನ್ನು ತೆರವುಗೊಳಿಸಲು ಸೂಚಿಸುವಂತೆ ಕೋರಿ ‘ಕಾಶ್ಮೀರ ಟೈಮ್ಸ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಅನುರಾಧಾ ಭಾಸಿನ್ ಅವರು ಮನವಿ ಮಾಡಿದ್ದಾರೆ.  

ಲಾಹೋರ್‌ನತ್ತ ತೆರಳಿದ ಬಸ್: ಲಾಹೋರ್–ದೆಹಲಿ ಬಸ್ ಸಂಚಾರ ರದ್ದುಗೊಳಿಸಲು ಪಾಕಿಸ್ತಾನ ನಿರ್ಧರಿಸಿದ್ದರೂ, ಇಬ್ಬರು ಪ್ರಯಾಣಿಕರು ಇದ್ದ ಬಸ್‌ ಶನಿವಾರ ಬೆಳಿಗ್ಗೆ ದೆಹಲಿಯಿಂದ ಲಾಹೋರ್‌ನತ್ತ ಪ್ರಯಾಣ ಬೆಳೆಸಿತು.

ಸ್ನೇಹಸೂಚಕವಾಗಿ 1999ರಲ್ಲಿ ಆರಂಭವಾಗಿದ್ದ ಬಸ್ ಸೇವೆಯು, ಸಂಸತ್ ದಾಳಿಯ ಕಾರಣ 2001ರಲ್ಲಿ ಸ್ಥಗಿತಗೊಂಡಿತ್ತು. 2003ರಲ್ಲಿ ಪುನರಾರಂಭವಾಗಿತ್ತು.  

ಭಾರತಕ್ಕೆ ರಷ್ಯಾ ಬೆಂಬಲ: ಕಾಶ್ಮೀರ ವಿಚಾರವಾಗಿ ಭಾರತ ತೆಗೆದುಕೊಂಡ ನಿರ್ಧಾರವನ್ನು ರಷ್ಯಾ ಬೆಂಬಲಿಸಿದೆ.

‘ಕಾಶ್ಮೀರವನ್ನು ರಾಜ್ಯ ಸ್ಥಾನಮಾನದಿಂದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನಕ್ಕೆ ಬದಲಾಯಿಸುವ ಭಾರತದ ಕ್ರಮ ಸಂವಿಧಾನದ ಚೌಕಟ್ಟಿನೊಳಗೆ ಇದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಶಿಮ್ಲಾ ಒಪ್ಪಂದ ಹಾಗೂ ಲಾಹೋರ್ ಘೋಷಣೆಗಳ ಆಧಾರದಲ್ಲಿ ಬಗೆಹರಿಯುವ ವಿಶ್ವಾಸವಿದೆ’ ಎಂದು ರಷ್ಯಾ ಹೇಳಿದೆ.

ನಿಷೇಧಾಜ್ಞೆ ತೆರವು, ಶಾಲಾ ಕಾಲೇಜು ಪುನರಾರಂಭ

ಕಣಿವೆಯ ಐದು ಜಿಲ್ಲೆಗಳಲ್ಲಿ ಹೇರಿದ್ದ ನಿಷೇಧಾಜ್ಞೆ (ಕಲಂ 144) ಹಾಗೂ ದೋಡಾ, ಕಿಶ್ತ್‌ವಾರ್ ಜಿಲ್ಲೆಗಳಲ್ಲಿ ವಿಧಿಸಿದ್ದ ಕರ್ಫ್ಯೂ ತೆರವುಗೊಳಿಸಿಲಾಗಿದೆ ಎಂದು ಅಧಿಕಾರಿಗಳು ಆಗಸ್ಟ್ 10 ರ ಶನಿವಾರ ಮಾಹಿತಿ ನೀಡಿದ್ದಾರೆ. 

ಜಮ್ಮು ವಲಯದ ಜಮ್ಮು, ಕಠುವಾ, ಸಾಂಬಾ, ಉಧಂಪುರ ಮತ್ತು ರಿಯಾಸೀ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಶಾಲಾ–ಕಾಲೇಜುಗಳು ಶನಿವಾರದಿಂದ ಪುನರಾರಂಭಗೊಂಡಿವೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆಯೂ ಹೆಚ್ಚಳವಾಗಿದೆ. 

‘ಆಗಸ್ಟ್ 5ರಿಂದ ಇಡೀ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಮಾರುಕಟ್ಟೆ, ಅಂಗಡಿಗಳು ತೆರೆದಿವೆ. ವಾಹನ ಸಂಚಾರವೂ ಸಹಜವಾಗಿದ್ದು, ಜನರು ನಿರಾಳರಾಗಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.  ಪೂಂಛ್, ರಜೌರಿ ಹಾಗೂ ರಾಮಬಾಣ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಮುಂದುವರಿದಿದೆ.

370ನೇ ವಿಧಿ ರದ್ದು ಖಂಡಿಸಿ ಕಳೆದೊಂದು ವಾರದಿಂದ ಕಾಶ್ಮೀರ ಕಣಿವೆಯಲ್ಲಿ ಕೇವಲ ಬೀದಿ ಪ್ರತಿಭಟನೆ ಮಾತ್ರ ನಡೆದಿವೆ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

ಶ್ರೀನಗರ, ಬಾರಾಮುಲ್ಲಾದಲ್ಲಿ ನಡೆದ ಕೆಲವು ಪ್ರತಿಭಟನೆಗಳಲ್ಲಿ, ಜನರ ಸಂಖ್ಯೆ 20ಕ್ಕಿಂತ ಹೆಚ್ಚು ಇರಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ. 10 ಸಾವಿರ ಜನರು ಪ್ರತಿಭಟನೆ ನಡೆಸಿದ್ದಾರೆ ಎಂಬುದು ಕಲ್ಪಿತ ವಿಚಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.