35 ನೇ ಜಿಎಸ್‌ಟಿ ಮಂಡಳಿಯ ಸಭೆ : ಲಾಭ ವರ್ಗಾಯಿಸದ ಸಂಸ್ಥೆಗೆ ದಂಡ

0
12

ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳಿಗೆ ಶೇ 10ರಷ್ಟು ದಂಡ ವಿಧಿಸುವುದಕ್ಕೆ ಜಿಎಸ್‌ಟಿ ಮಂಡಳಿಯು ಅನುಮೋದನೆ ನೀಡಿದೆ.

ನವದೆಹಲಿ (ಪಿಟಿಐ): ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳಿಗೆ ಶೇ 10ರಷ್ಟು ದಂಡ ವಿಧಿಸುವುದಕ್ಕೆ ಜಿಎಸ್‌ಟಿ ಮಂಡಳಿಯು ಅನುಮೋದನೆ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಜೂನ್ 21 ರ ಶುಕ್ರವಾರ ನಡೆದ ಮಂಡಳಿ ಸಭೆಯು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಸದ್ಯಕ್ಕೆ ಲಾಭ ವರ್ಗಾಯಿಸದ ಸಂಸ್ಥೆಗಳಿಗೆ ಗರಿಷ್ಠ  25 ಸಾವಿರ ದಂಡ ವಿಧಿಸಲು ಅವಕಾಶ ಇದೆ. ದಂಡದ ಮೊತ್ತವನ್ನು ಈಗ ಸಂಸ್ಥೆ ಗಳಿಸಿದ ಲಾಭದ ಶೇ 10ರಷ್ಟಕ್ಕೆ ಹೆಚ್ಚಿಸಲಾಗಿದೆ.

ಗಡುವು ವಿಸ್ತರಣೆ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್‌ ಸಲ್ಲಿಕೆಯ ಗಡುವನ್ನು ಎರಡು ತಿಂಗಳವರೆಗೆ (ಆಗಸ್ಟ್‌ 30ರವರೆಗೆ) ವಿಸ್ತರಿಸಲಾಗಿದೆ.

ಹೊಸ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಯ ವ್ಯವಸ್ಥೆಯು 2020ರ ಜನವರಿ 1 ರಿಂದ ಜಾರಿಗೆ ಬರಲಿದೆ. 

ಅವಧಿ ವಿಸ್ತರಣೆ: ಲಾಭಕೋರತನ ತಡೆ ಪ್ರಾಧಿಕಾರದ (ಎನ್‌ಎಎ) ಅಧಿಕಾರಾವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ.

ವಹಿವಾಟುದಾರರು ಜಿಎಸ್‌ಟಿ ಜಾಲದ ನೋಂದಣಿ ಪಡೆಯಲು ಆಧಾರ್‌ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಎಲೆಕ್ಟ್ರಾನಿಕ್‌ ಇನ್‌ವಾಯ್ಸ್‌ ವ್ಯವಸ್ಥೆಯನ್ನು 2020ರ ಜನವರಿ 1ರಿಂದ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೆ ತರಲು ಮಂಡಳಿಯು ಸಮ್ಮತಿಸಿದೆ.

ಜಿಎಸ್‌ಟಿ ನೋಂದಾಯಿತ ಮಲ್ಟಿಪ್ಲೆಕ್ಸ್‌ಗಳು ಇ–ಟಿಕೆಟ್‌ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಶೇ 12 ರಿಂದ ಶೇ 5ಕ್ಕೆ ಇಳಿಸಲು, ಎಲೆಕ್ಟ್ರಿಕ್‌ ಚಾರ್ಜರ್‌ಗಳ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸುವ ಪ್ರಸ್ತಾವ ಪರಿಶೀಲಿಸಿ ಶಿಫಾರಸು ನೀಡಲು ಸಮಿತಿಯ ಪರಿಶೀಲನೆಗೆ ಸಲ್ಲಿಸಲಾಗಿದೆ.