35 ದೇಶಗಳನ್ನು ಸುತ್ತಿ ಬಂದ ಮುಂಬೈ ಪತ್ರಕರ್ತ “ವಿಷ್ಣುದಾಸ್ ಚಾಪ್ಕೆ”(ಮೂರು ವರ್ಷಗಳ ಏಕಾಂಗಿ ಪಯಣ ಪೂರ್ಣ!)

0
410

ಏಕಾಂಗಿಯಾಗಿ ಪ್ರಪಂಚ ಪರ್ಯಟನೆ ಆರಂಭಿಸಿದ ಪತ್ರಕರ್ತ ವಿಷ್ಣುದಾಸ್ ಚಾಪ್ಕೆ (36), ಮೂರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ.

ಮುಂಬೈ: ಏಕಾಂಗಿಯಾಗಿ ಪ್ರಪಂಚ ಪರ್ಯಟನೆ ಆರಂಭಿಸಿದ ಪತ್ರಕರ್ತ ವಿಷ್ಣುದಾಸ್ ಚಾಪ್ಕೆ (36), ಮೂರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ್ದಾರೆ. 

ಠಾಣೆ ರೈಲು ನಿಲ್ದಾಣದಿಂದ 2016 ಮಾರ್ಚ್‌ 19 ರಂದು ಇವರ ಪಯಣ ಆರಂಭವಾಗಿತ್ತು.  ಮಾರ್ಚ್ 21 ರ ಗುರುವಾರ ಸಂಜೆ ಹೋಳಿ ಹಬ್ಬದ ಸಂಭ್ರಮದಂದು ಠಾಣೆ ನಿಲ್ದಾಣದಲ್ಲಿ ಇಳಿಯುವ ಮೂಲಕ ಮೂರು ವರ್ಷಗಳ ‘ಸರ್ಕಮ್‌ನ್ಯಾವಿಗೇಷನ್’ ಪೂರ್ಣಗೊಳಿಸಿದ್ದಾರೆ. 

ಏಷ್ಯಾ, ಯೂರೋಪ್‌, ದಕ್ಷಿಣ ಅಮೆರಿಕ ಮತ್ತು ಯುರೋಪ್‌ ಖಂಡಗಳ 35 ದೇಶಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಕಣ್ತುಂಬಿಕೊಂಡಿದ್ದಾರೆ. 

ಈ ಪಯಣದ ಉದ್ದಕ್ಕೂ ಪರಿಸರ ರಕ್ಷಣೆ, ಯೋಗಾ ಮತ್ತು ಸಮಗ್ರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಿರುವ ಹೆಗ್ಗಳಿಕೆ ಇವರದು. 

ಇವರ ತಂದೆ ಪರ್ಭಾನಿ ಜಿಲ್ಲೆಯ ಮರಾಠವಾಡದಲ್ಲಿ ಕೃಷಿಕರು. ಇವರ ಈ ಪಯಣಕ್ಕೆ ಸಂಘ ಸಂಸ್ಥೆಗಳು ಮತ್ತು ಜನರು ನೆರವು ನೀಡಿದ್ದಾರೆ.  ‘ಎಷ್ಟು ದೂರ ಕ್ರಮಿಸಿರಬಹುದು ಎಂಬುದನ್ನು ಇನ್ನು ಲೆಕ್ಕ ಹಾಕಬೇಕಿದೆ. ಸುಮಾರು 40,000 ಕಿ.ಮೀ. ಪಯಣ ಬೆಳೆಸಿರಬಹುದು. ಇದೊಂದು ಅದ್ಭುತವಾದ ಪಯಣ… ನಾನು ವಾಪಸ್ಸಾಗಿದ್ದೇನೆ. ಈ ಪಯಣ ನನಗೆ ಸಾಕಷ್ಟು ಕಲಿಸಿದೆ. ನಾನು ಸ್ವಂತ ದೇಶದಲ್ಲಿದ್ದೇನೆ. ಇದು ನನ್ನ ಭೂಮಿ. ಪಾಸ್‌ಪೋರ್ಟ್‌, ವೀಸಾ ತೋರಿಸುವ ಅಗತ್ಯವೇ ಇಲ್ಲ’ ಎಂದು ವಿಷ್ಣುದಾಸ್ ಖುಷಿ ಹಂಚಿಕೊಳ್ಳುತ್ತಾರೆ. 

ಇವರ ಈ ಸಾಹಸಕ್ಕೆ ಸರ್ಕಮ್‌ನ್ಯಾವಿಗೇಷನ್ ಮಾಡಿದ ಭಾರತದ ಮೊದಲ ಸಾಹಸಿ ಕ್ಯಾಪ್ಟನ್‌ ದಿಲೀಪ್‌ ಡೋಂಡೆ ಪ್ರೇರಣೆಯಂತೆ. ಪವರ್ ವಿಮಾನ, ಹಾಯಿದೋಣಿ ಮೂಲಕ ಜನರು ಸರ್ಕಮ್‌ನ್ಯಾವಿಗೇಷನ್ ಮಾಡುತ್ತಾರೆ. ಆದರೆ ನಾನು ರಸ್ತೆ ಬಳಸಿ ಈ ಸಾಧನೆ ಮಾಡಿದ್ದೇನೆ ಎಂದು ಬೀಗುತ್ತಾರೆ ವಿಷ್ಣುದಾಸ್.

ರೈಲು, ಟ್ರಕ್‌, ಬಸ್‌, ಕಾರ್‌, ಆಂಬುಲೆನ್ಸ್‌ ಮತ್ತು ಪೊಲೀಸ್‌ ವ್ಯಾನ್‌ ಬಳಸಿ ಇವರು ಪಯಣ ಪೂರ್ಣಗೊಳಿಸಿದ್ದಾರೆ. ಹೋಮ್‌ ಸ್ಟೇ, ಬಸ್‌ ಮತ್ತು ರೈಲು ನಿಲ್ದಾಣವೇ ಇವರಿಗೆ ತಂಗುದಾಣವಾಗಿತ್ತು.