3000 ಮೀಟರ್ಸ್‌ನಲ್ಲಿ “ಕಾಸ್ಟರ್‌ ಸೆಮೆನ್ಯಾ” ಓಟ

0
15

ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ ಅವರು ಜೂನ್‌ 30ರಂದು ನಡೆಯುವ ಡೈಮಂಡ್‌ ಲೀಗ್ ಪ್ರಿಫಾಂಟೇನ್‌ ಕ್ಲಾಸಿಕ್‌ ಅಥ್ಲೆಟಿಕ್ಸ್‌ನಲ್ಲಿ 3,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಟ್ರ್ಯಾಕ್‌ಗೆ ಇಳಿಯಲಿದ್ದಾರೆ.

ಲಾಸ್‌ ಏಂಜಲೀಸ್‌ (ಎಎಫ್‌ಪಿ): ದಕ್ಷಿಣ ಆಫ್ರಿಕಾದ ಕಾಸ್ಟರ್‌ ಸೆಮೆನ್ಯಾ ಅವರು ಜೂನ್‌ 30ರಂದು ನಡೆಯುವ ಡೈಮಂಡ್‌ ಲೀಗ್ ಪ್ರಿಫಾಂಟೇನ್‌ ಕ್ಲಾಸಿಕ್‌ ಅಥ್ಲೆಟಿಕ್ಸ್‌ನಲ್ಲಿ 3,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಟ್ರ್ಯಾಕ್‌ಗೆ ಇಳಿಯಲಿದ್ದಾರೆ.

ಮಹಿಳಾ ಅಥ್ಲೀಟ್‌ಗಳಲ್ಲಿ ಪುರುಷ ಹಾರ್ಮೋನು ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಐಎಎಎಫ್‌) ಹೊಸ ನಿಯಮವು ಮೇ 8ಕ್ಕೆ ಜಾರಿಯಾಗಿರುವ ಕಾರಣ ಸೆಮೆನ್ಯಾ 800 ಮೀಟರ್ಸ್‌ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಅವರು ಎರಡು ಸಲ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ದಾಖಲೆ ಹೊಂದಿದ್ದಾರೆ.

ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹೋದ ತಿಂಗಳು ಆಯೋಜನೆಯಾಗಿದ್ದ ಡೈಮಂಡ್‌ ಲೀಗ್‌ನಲ್ಲಿ ಸೆಮೆನ್ಯಾ 800 ಮೀಟರ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ವಿಭಾಗದಲ್ಲಿ ಅವರು ಭಾಗವಹಿಸಿದ ಕೊನೆಯ ಸ್ಪರ್ಧೆ ಇದಾಗಿತ್ತು.

‘ಸೆಮೆನ್ಯಾ ಅವರು ಪ್ರಿಫಾಂಟೇನ್‌ ಕ್ಲಾಸಿಕ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ವಿಷಯ ತಿಳಿದು ತುಂಬಾ ಖುಷಿಯಾಯಿತು.

ವಿಶ್ವದ ಶ್ರೇಷ್ಠ ದೂರ ಅಂತರದ ಓಟಗಾರ್ತಿಯರ ಜೊತೆ ಅವರು ಹೇಗೆ ಓಡುತ್ತಾರೆ, ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವರೇ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ’ ಎಂದು ಪ್ರಿಫಾಂಟೇನ್‌ ಕ್ಲಾಸಿಕ್‌ ಅಥ್ಲೆಟಿಕ್ಸ್‌ನ ನಿರ್ದೇಶಕ ಟಾಮ್‌ ಜೋರ್ಡನ್‌ ತಿಳಿಸಿದ್ದಾರೆ.

2017ರ ವಿಶ್ವ ಚಾಂಪಿಯನ್‌ಷಿಪ್‌ನ 5,000 ಮೀಟರ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿರುವ ಹೆಲೆನ್‌ ಓಬಿರಿ, 2016ರಲ್ಲಿ ನಡೆದಿದ್ದ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನ 1,500 ಮೀಟರ್ಸ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಸಿಫಾನ್‌ ಹಸನ್‌ ಮತ್ತು 2018ರ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನ 1,500 ಮತ್ತು 3,000 ಮೀಟರ್ಸ್‌ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ಜೆಂಜೆಬೆ ದಿಬಾಬ ಅವರೂ ಪ್ರಿಫಾಂಟೇನ್‌ ಕ್ಲಾಸಿಕ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.