30 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ

0
10

‘ಬಜೆಟ್‌ನಲ್ಲಿ ಮಂಡಿಸಿರುವ ತೆರಿಗೆ ಪ್ರಸ್ತಾವನೆಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 30 ಸಾವಿರ ಕೋಟಿ ವರಮಾನ ಬರಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

ನವದೆಹಲಿ (ಪಿಟಿಐ): ‘ಬಜೆಟ್‌ನಲ್ಲಿ ಮಂಡಿಸಿರುವ ತೆರಿಗೆ ಪ್ರಸ್ತಾವನೆಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 30 ಸಾವಿರ ಕೋಟಿ ವರಮಾನ ಬರಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

‘ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ವಿಧಿಸಿರುವುದರಿಂದ  30 ಸಾವಿರ ಕೋಟಿ ಬರಲಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ 9 ತಿಂಗಳು ಬಾಕಿ ಇರುವುದರಿಂದ ಸರ್ಕಾರಕ್ಕೆ 22 ಸಾವಿರ ಕೋಟಿಗಳಷ್ಟೆ ವರಮಾನ ಬರುವ ಅಂದಾಜು ಮಾಡಲಾಗಿದೆ’ ಎಂದಿದ್ದಾರೆ.

2 ಕೋಟಿಗಳಿಂದ 5 ಕೋಟಿವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದವರಿಗೆ ಶೇ 3ರಷ್ಟು ಮತ್ತು  5 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಶೇ 7ರಷ್ಟು ಸರ್ಚಾರ್ಜ್‌ ವಿಧಿಸಲಾಗಿದೆ. ಇದರಿಂದ  12 ಸಾವಿರ ಕೋಟಿಯಿಂದ  13 ಸಾವಿರ ಕೋಟಿವರೆಗೂ ಹೆಚ್ಚುವರಿ ವರಮಾನ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ.

ವರಮಾನ ನಷ್ಟ: ವಾರ್ಷಿಕ  400 ಕೋಟಿಯವರೆಗೆ ವಹಿವಾಟು ಮಿತಿ ಹೊಂದಿದ ಕಂಪನಿಗಳನ್ನು ಶೇ 25ರ ಕಾರ್ಪೊರೇಟ್‌ ತೆರಿಗೆ ವ್ಯಾಪ್ತಿಯ ಒಳಗೆ ತರಲಾಗಿದೆ. ಇದರಿಂದ ಸರ್ಕಾರಕ್ಕೆ  4 ಸಾವಿರ ಕೋಟಿಗಳಷ್ಟು ನಷ್ಟವಾಗಲಿದೆ.

‘ಚಿನ್ನದ ಆಮದು ಮೇಲಿನ ಸುಂಕವನ್ನು ಶೇ 10ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ  3 ಸಾವಿರ ಕೋಟಿಯಿಂದ  4 ಸಾವಿರ ಕೋಟಿ ಸಂಗ್ರಹವಾಗಲಿದೆ. ಆದರೆ, ಬೇರೆ ಸರಕುಗಳ ಕಸ್ಟಮ್ಸ್‌ ಸುಂಕ ಇಳಿಕೆ ಮಾಡಿರುವುದರಿಂದ ಈ ವರಮಾನ ಗಳಿಕೆಯು ಅಲ್ಲಿಗೆ ಹೊಂದಾಣಿಕೆ ಆಗಲಿದೆ’ ಎಂದು ತಿಳಿಸಿದ್ದಾರೆ.