3 ನೇ ನೇಷನ್ಸ್ ಕಪ್‌ ಬಾಕ್ಸಿಂಗ್ ಟೂರ್ನಿ : ಭಾರತದ ಮುಡಿಗೆ 12 ಪದಕ

0
17

ಮಿಂಚಿನ ಆಟವಾಡಿದ ಭಾರತದ ಕಿರಿಯ ಮಹಿಳಾ ಬಾಕ್ಸರ್‌ಗಳು ಸರ್ಬಿಯಾದ ವರ್ಬಾಸ್‌ನಲ್ಲಿ ನಡೆದ 3 ನೇ ನೇಷನ್ಸ್ ಕಪ್‌ ಟೂರ್ನಿಯಲ್ಲಿ 12 ಪದಕಗಳನ್ನು ಗೆದ್ದಿದ್ದಾರೆ.

ನವದೆಹಲಿ (ಪಿಟಿಐ): ಮಿಂಚಿನ ಆಟವಾಡಿದ ಭಾರತದ ಕಿರಿಯ ಮಹಿಳಾ ಬಾಕ್ಸರ್‌ಗಳು ಸರ್ಬಿಯಾದ ವರ್ಬಾಸ್‌ನಲ್ಲಿ ನಡೆದ 3 ನೇ  ನೇಷನ್ಸ್ ಕಪ್‌ ಟೂರ್ನಿಯಲ್ಲಿ 12 ಪದಕಗಳನ್ನು ಗೆದ್ದಿದ್ದಾರೆ. ಮಣಿಪುರದ ಅಂಜು ದೇವಿ ಬೆಳ್ಳಿ ನಗೆ ಮೂಡಿಸಿದರು. ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಹಾಗೂ ನಾಲ್ಕು ಕಂಚುಗಳೊಂದಿಗೆ ಭಾರತ ರನ್ನರ್‌ಅಪ್‌ ಆಗಿದೆ. 

ತಮನ್ನಾ (48 ಕೆಜಿ ವಿಭಾಗ), ಅಂಬೆಶೋರಿ ದೇವಿ (57 ಕೆಜಿ), ಪ್ರೀತಿ ದಹಿಯಾ (60 ಕೆಜಿ) ಹಾಗೂ ಪ್ರಿಯಾಂಕಾ (66 ಕೆಜಿ) ಚಿನ್ನದ ಪದಕಗಳಿಗೆ ಮುತ್ತಿಟ್ಟರು. ತಮನ್ನಾ ಅವರಿಗೆ ಟೂರ್ನಿಯಲ್ಲಿ ಶ್ರೇಷ್ಠ ವಿದೇಶಿ ಬಾಕ್ಸರ್‌ ಎಂಬ ಗೌರವವೂ ಒಲಿಯಿತು.  ಫೈನಲ್‌ ಬೌಟ್‌ನಲ್ಲಿ ಅವರು ರಷ್ಯಾದ ಅಲೆನಾ ಟ್ರೆಮಾಸೊವಾ ಅವರನ್ನು 5–0 ಪಾಯಿಂಟ್‌ಗಳಿಂದ ಸೋಲಿಸಿದರು.

ಮಣಿಪುರದ ಅಂಬೆಶೋರಿ ಹಾಗೂ ಹರಿಯಾಣದ ದಹಿಯಾ ಪ್ರಬಲ ಪೈಪೋಟಿಯಲ್ಲಿ ಕ್ರಮವಾಗಿ ಸ್ವೀಡನ್‌ನ ಡುನಾ ಸಿಪೆಲ್‌ ಹಾಗೂ ಉಕ್ರೇನ್‌ನ ಕ್ರಿಸ್ಟಿನಾ ಕರ್ಟಾವತ್ಸೆವಾ ಅವರನ್ನು 3–2ರಿಂದ ಮಣಿಸಿದರು. ಹರಿಯಾಣದ ಪ್ರಿಯಾಂಕಾ ಅವರು ರಷ್ಯಾದ ಒಲ್ಗಾ ಪೆಟ್ರಾಷ್ಕೊ ವಿರುದ್ಧ 5–0ಯಿಂದ ಜಯದ ನಗೆ ಬೀರಿದರು.
 
ಕರ್ನಾಟಕದ ಅಂಜುದೇವಿ (50 ಕೆಜಿ), ಸಿಮ್ರಾನ್‌ ವರ್ಮಾ (52 ಕೆಜಿ), ಹರಿಯಾಣದ ಮಾನಷಿ ದಲಾಲ್‌ (75 ಕೆಜಿ) ಹಾಗೂ ಪಂಜಾಬ್‌ನ ತನೀಶ್‌ಬೀರ್‌ ಕೌರ್‌ ಸಂಧು (80 ಕೆಜಿ) ಬೆಳ್ಳಿ ಗೆದ್ದವರು. ಗೋವಾದ ಆಶ್ರೇಯಾ ನಾಯ್ಕ (63 ಕೆಜಿ), ನೇಹಾ (54 ಕೆಜಿ), ಖುಷಿ (70 ಕೆಜಿ) ಹಾಗೂ ಅಲ್ಫಿಯಾ ಅಕ್ರಂ ಖಾನ್‌ (80+ ಕೆಜಿ) ಅವರು ಸೆಮಿಫೈನಲ್‌ ಪಂದ್ಯಗಳಲ್ಲಿ ಸೋತು ಕಂಚಿ ಪದಕಗಳಿಗೆ ತೃಪ್ತಿಪಟ್ಟರು.