2020 ರ ಒಲಿಂಪಿಕ್ಸ್​ಗೆ ಭಾರತದ ಶೂಟರ್ ಗಳಾದ ಅಂಜುಂ, ಅಪೂರ್ವಿ ಅರ್ಹ

0
522

ಭಾರತದ ಸ್ಟಾರ್ ಶೂಟರ್​ಗಳಾದ ಅಂಜುಂ ಮೌದ್ಗಿಲ್ ಹಾಗೂ ಅಪೂರ್ವಿ ಚಾಂಡೆಲಾ, 2020ರಲ್ಲಿ ಜಪಾನ್​ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಚಾಂಗ್ವಾನ್ (ದಕ್ಷಿಣ ಕೊರಿಯಾ): ಭಾರತದ ಸ್ಟಾರ್ ಶೂಟರ್​ಗಳಾದ ಅಂಜುಂ ಮೌದ್ಗಿಲ್ ಹಾಗೂ ಅಪೂರ್ವಿ ಚಾಂಡೆಲಾ, 2020ರಲ್ಲಿ ಜಪಾನ್​ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಐಎಸ್​ಎಸ್​ಎಫ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸೆಪ್ಟೆಂಬರ್ 3 ರ ಸೋಮವಾರ ನಡೆದ 10 ಮೀಟರ್ ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಅಂಜುಂ ಹಾಗೂ ಅಪೂರ್ವಿ ಕ್ರಮವಾಗಿ ಬೆಳ್ಳಿ ಹಾಗೂ 4ನೇ ಸ್ಥಾನ ಪಡೆದು ಈ ಸಾಧನೆ ಮಾಡಿದರು. 24 ವರ್ಷದ ಮೌದ್ಗಿಲ್, 248.4 ಅಂಕ ಕಲೆ ಹಾಕಿದರೆ, ಕೊರಿಯಾದ ಹನಾ ಇಮ್ (251.1ಅಂಕ) ಸ್ವರ್ಣ ಗೆದ್ದರು. ಕೊರಿಯಾದವರೇ ಆದ ಇವುನಾ ಜಂಗ್ (228.0) ಕಂಚು ಗೆದ್ದುಕೊಂಡರು. 207 ಅಂಕಗಳಿಸಿದ ಅಪೂರ್ವಿ ಚಾಂಡೆಲಾ, 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೂ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿ ಸಂಭ್ರಮಿಸಿದರು. ಅರ್ಹತಾ ಸುತ್ತಿನಲ್ಲಿ ಮೌದ್ಗಿಲ್ ಹಾಗೂ ಚಾಂಡೆಲಾ ಕ್ರಮವಾಗಿ 4ನೇ ಹಾಗೂ 6ನೇ ಸ್ಥಾನದೊಂದಿಗೆ ಪ್ರಧಾನ ಸುತ್ತಿಗೇರಿದ್ದರು. ಈ ಕೂಟದಲ್ಲಿ 15 ವಿಭಾಗಗಳಿಂದ 60 ಶೂಟರ್​ಗಳಿಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ನೀಡಲಾಗುತ್ತಿದೆ. ಇಬ್ಬರು ಶೂಟರ್​ಗಳು ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರೂ ತಂಡದ ಆಯ್ಕೆ ವಿಚಾರದಲ್ಲಿ ಭಾರತೀಯ ರೈಫಲ್ ಸಂಸ್ಥೆ (ಎನ್​ಆರ್​ಎಐ) ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದ ಕೂಟಗಳಲ್ಲಿ ಶೂಟರ್​ಗಳು ಗಳಿಸುವ ಅಂಕಗಳ ಸರಾಸರಿಯಲ್ಲಿ ತಂಡದ ಆಯ್ಕೆ ನಡೆಯಲಿದೆ. ಪುರುಷರ ವಿಭಾಗದಲ್ಲಿ ಏಷ್ಯಾಡ್ ಪದಕ ವಿಜೇತ ಭಾರತದ ದೀಪಕ್ ಕುಮಾರ್, 10 ಮೀಟರ್ ಏರ್​ರೈಫಲ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ತೇರ್ಗಡೆ ಹೊಂದಿದ್ದರೂ ನಿಕಟ ಪೈಪೋಟಿಯಿಂದ ಫೈನಲ್​ನಲ್ಲಿ 6ನೇ ಸ್ಥಾನ ಪಡೆದರು. 10 ಮೀಟರ್ ಏರ್ ರೈಫಲ್ ಹಾಗೂ ಪಿಸ್ತೂಲ್ ವಿಭಾಗದಲ್ಲಿ ಭಾರತ ತಂಡ ಫೈನಲ್​ಗೇರಲು ವಿಫಲಗೊಂಡಿತು. ಜೂನಿಯರ್ ವಿಭಾಗದಲ್ಲಿ ಭಾರತ 2 ಪದಕ ಗೆದ್ದುಕೊಂಡಿತು.