2019-20 ನೇ ಸಾಲಿನ ಕೇಂದ್ರ ಬಜೆಟ್ : ಪೆಟ್ರೋಲ್‌, ಡೀಸೆಲ್‌ಗೆ ಸೆಸ್‌ ಹೊರೆ

0
73

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಪ್ರಯಾಣದ ಹೊರೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಪ್ರಯಾಣದ ಹೊರೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ  1 ರಂತೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಹಾಗೂ  1 ರಂತೆ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ಒಟ್ಟಾರೆ  2 ಏರಿಕೆಯಾಗಿದೆ. ಇದರಿಂದ ಈಗಾಗಲೇ ಗರಿಷ್ಠ ಮಟ್ಟದಲ್ಲಿರುವ ಇಂಧನ ದರ ಮತ್ತಷ್ಟು ಏರಿಕೆಯಾಗಲಿದೆ.

‘ಕಚ್ಚಾ ತೈಲ ದರ ಇಳಿಮುಖವಾಗಿರುವುದರಿಂದ ತೆರಿಗೆ ದರ ಪರಿಷ್ಕರಣೆಗೆ ಅವಕಾಶ ದೊರೆತಿದೆ’ ಎಂದು ತಮ್ಮ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಮರ್ಥಿಸಿಕೊಂಡಿದ್ದಾರೆ.

ಒಂದು ವಾರದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಏರುಮುಖವಾಗಿಯೇ ಇವೆ. ಜುಲೈ 5 ರ ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್‌ ದರ  72.83 ಇದ್ದರೆ, ಡೀಸೆಲ್‌ ದರ  66.45 ಇದೆ. ರಾಜ್ಯ ವಿಧಿಸುವ ತೆರಿಗೆ ಸೇರಿಸಿದರೆ ಪ್ರತಿ ಲೀಟರ್‌ ದರ  2.60 ರಿಂದ 3ರವರೆಗೂ ಏರಿಕೆಯಾಗಲಿದೆ. ಸದ್ಯಕ್ಕೆ, ಎಕ್ಸೈಸ್‌ ಸುಂಕವು ಪ್ರತಿ ಲೀಟರ್‌ ಪೆಟ್ರೋಲ್‌ಗೆ  17.98 ಮತ್ತು ವ್ಯಾಟ್‌  14.98 ಇದೆ. 

ಗ್ರಾಹಕರಿಗೇ ಹೊರೆ: ‘ಸೆಸ್‌ ಹೊರೆಯನ್ನು ನೇರವಾಗಿ ಗ್ರಾಹಕರೇ ಭರಿಸಬೇಕಾಗುತ್ತದೆ. ಒಂದೊಂದು ರಾಜ್ಯಗಳಲ್ಲಿ ಬೇರೆ ಬೇರೆ ಮಾರಾಟ ತೆರಿಗೆ ದರ ಇದೆ. ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್‌ ದರ  2.60 ಮತ್ತು ಡೀಸೆಲ್‌ ದರ  2.40ರಷ್ಟು ಹೆಚ್ಚಾಗಲಿದೆ ’ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟದ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಂಧನ ದರ ಪರಿಷ್ಕರಣೆ ಲೆಕ್ಕಾಚಾರವೇ ಅರ್ಥ ಆಗುತ್ತಿಲ್ಲ. ಯಾವ ರೀತಿಯಲ್ಲಿ ದರ ಏರಿಕೆ ಅಥವಾ ಇಳಿಕೆ ಮಾಡಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಸೆಸ್‌ ಏರಿಕೆ ಹೊರೆ ಜನರ ಮೇಲೆಯೇ ಬೀಳಲಿದೆ. ಮುಂಬರುವ ದಿನಗಳಲ್ಲಿ ಇಂಧನ ದರಗಳು ಏರಿಕೆಯಾಗುತ್ತಲೇ ಹೋಗಲಿವೆ’ ಎಂದು ರಾಜ್ಯ ಪೆಟ್ರೋಲಿಯಂ ವಿತರಕರ ಸಂಘದ ಖಜಾಂಚಿ ಅರುಣ ಹುಂಡೇಕಾರ ಪ್ರತಿಕ್ರಿಯೆ ನೀಡಿದ್ದಾರೆ.

ಕಚ್ಚಾ ತೈಲ ದರ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುಮುಖವಾಗಿಯೇ ಇದೆ. 2019ರ ಜನವರಿ 1ರಂದು ಬ್ರೆಂಟ್‌ ತೈಲ ದರ ಪ್ರತಿ ಬ್ಯಾರೆಲ್‌ಗೆ 53.80 ಡಾಲರ್‌ಗಳಷ್ಟಿತ್ತು. ಜೂನ್‌ 5ರಂದು ಪ್ರತಿ ಬ್ಯಾರೆಲ್‌ಗೆ 63.63 ಡಾಲರ್‌ಗಳಷ್ಟಿದೆ. ಅಂದರೆ 9.83 ಡಾಲರ್‌ಗಳಷ್ಟು ಏರಿಕೆ ಕಂಡಿದೆ.