2019 ರ ಗಣರಾಜ್ಯೋತ್ಸವಕ್ಕೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ ಮುಖ್ಯ ಅತಿಥಿ

0
503

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರು ಬರುವ 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ

ನವದೆಹಲಿ: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೋಸಾ ಅವರು ಬರುವ 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2018ರ ಫೆಬ್ರವರಿಯಲ್ಲಿ ರಾಮಫೋಸಾ ದಕ್ಷಿಣಾಫ್ರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಬೇಕು ಎಂಬ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭಾರತ ಸರ್ಕಾರ ನೀಡಿದ ಆಮಂತ್ರಣವನ್ನು ಅವರು ನಿರಾಕರಿಸಿದ್ದರು. ಅಂದು ಟ್ರಂಪ್​ ಅವರು ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲೇ ಬೇಕಾಗಿದ್ದರಿಂದ ಭಾರತಕ್ಕೆ ಭೇಟಿಕೊಡಲು ಆಗುವುದಿಲ್ಲ ಎಂದು ವೈಟ್​ಹೌಸ್​ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು.

ರಾಮಫೋಸಾ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಬೇಕು ಎಂಬುದು ನೆಲ್ಸನ್​ ಮಂಡೇಲಾ ಅವರ ಇಂಗಿತವಾಗಿತ್ತು. ಏಪ್ರಿಲ್​ನಲ್ಲಿ ನಡೆದ ವಾರ್ಷಿಕ ಗಾಂಧಿ ನಡಿಗೆಯ ನೇತೃತ್ವವನ್ನು ರಾಮಫೋಸಾ ವಹಿಸಿದ್ದರು. ಅಧಿಕಾರದಲ್ಲಿದ್ದಾಗ ಅಧ್ಯಕ್ಷರೊಬ್ಬರು ನಡಿಗೆಯಲ್ಲಿ ಭಾಗವಹಿಸಿರುವುದು ಇದೇ ಮೊದಲು. ಸಮಯದಾಯ ಜಾಗೃತಿಗಾಗಿ ಜೋಹಾನ್ಸ್​ಬರ್ಗ್​ದ ದಕ್ಷಿಣ ಭಾಗದಲ್ಲಿರುವ ಭಾರತೀಯ ಪಟ್ಟಣ ಎಂದೇ ಹೆಸರಾದ ಲೆನಾಸಿಯಾದಲ್ಲಿ ಆಯೋಜಿಸಿದ್ದ ಗಾಂಧಿ ನಡಿಗೆಯಲ್ಲಿ ಸುಮಾರು 5000 ಜನರು ಭಾಗಿಯಾಗಿದ್ದರು.

ರಾಮಫೋಸಾ ಅವರು ಅಧ್ಯಕ್ಷರಾಗುವ ಮೊದಲು, ವರ್ಣಭೇದ ನೀತಿ ವಿರೋಧಿ ಸಂಘಟನೆಯ ಕಾರ್ಯಕರ್ತರಾಗಿದ್ದರು. ಅವರೊಬ್ಬ ಉದ್ಯಮಿಯಾಗಿ ಹಾಗೂ ಕಾರ್ಮಿಕ ಒಕ್ಕೂಟದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. 2014ರಿಂದ 2018ರವರೆಗೆ ದಕ್ಷಿಣಾಫ್ರಿಕಾದ ಉಪಾಧ್ಯಕ್ಷರಾಗಿದ್ದರು.