2019 ಜನೇವರಿ 26 ಗಣರಾಜ್ಯೋತ್ಸವ : ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಈಗ ಸ್ತಬ್ಧಚಿತ್ರ

0
1053

ರಾಷ್ಟ್ರಪಿತ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನ
ವನ್ನು ಪ್ರತಿಬಿಂಬಿಸುವ, ರಾಜ್ಯದ ಸ್ತಬ್ಧ ಚಿತ್ರವು ನವದೆಹಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದೆ.

ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನ
ವನ್ನು ಪ್ರತಿಬಿಂಬಿಸುವ, ರಾಜ್ಯದ ಸ್ತಬ್ಧ ಚಿತ್ರವು ನವದೆಹಲಿಯಲ್ಲಿ 2019 ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿದೆ.

ಪ್ರತಿ ವರ್ಷ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದ ರಾಜ್ಯಗಳು, ತಮ್ಮ ರಾಜ್ಯದ ವೈಶಿಷ್ಟ್ಯವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳನ್ನು ತಯಾರಿಸಿ, ಪ್ರದರ್ಶಿಸುತ್ತಿದ್ದವು. ಈ ವರ್ಷ ಮಹಾತ್ಮ ಗಾಂಧಿ ಅವರ 150ನೇ ವರ್ಷದ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ‘ಮಹಾತ್ಮ ಗಾಂಧಿ’ ಕುರಿತಾದ ಪರಿಕಲ್ಪನೆ ನೀಡಿ, ಸ್ತಬ್ಧ ಚಿತ್ರಗಳನ್ನು ರಚಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

ಕರ್ನಾಟಕವೂ ಸೇರಿದಂತೆ 14 ರಾಜ್ಯಗಳಿಗೆ ಸ್ತಬ್ಧಚಿತ್ರ ರೂಪಿಸಲು ಅವಕಾಶ ದೊರೆತಿದೆ. ಈ ಮೂಲಕ, ಸತತ ಎಂಟು ವರ್ಷಗಳಿಂದ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ರಾಜ್ಯಕ್ಕೆ ದೊರೆತಂತಾಗಿದೆ.

ಕಾಂಗ್ರೆಸ್‌ ಅಧಿವೇಶನ: ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್‌ ಅಧಿವೇಶನವು, ಬೆಳಗಾವಿಯ ಟಿಳಕವಾಡಿಯಲ್ಲಿ 1924ರ ಡಿಸೆಂಬರ್‌ 26 ಮತ್ತು 27ರಂದು ನಡೆದಿತ್ತು. 30,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಅಧಿವೇಶನದ ವೇಳೆ, ಪ್ರವೇಶ ದ್ವಾರದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯ ಮಾದರಿಯ ಗೋಪುರ ನಿರ್ಮಿಸಲಾಗಿತ್ತು. ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇದ್ದುದರಿಂದ ಸಮೀಪದಲ್ಲಿಯೇ ತಾತ್ಕಾಲಿಕ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಕುಡಿಯುವ ನೀರಿನ ಕೊರತೆಯಾಗಬಾರದೆಂದು ಬೃಹತ್‌ ಬಾವಿಯನ್ನು ತೋಡಲಾಗಿತ್ತು (ಈಗಲೂ ಅದು ಅಸ್ತಿತ್ವದಲ್ಲಿದ್ದು, ಅದನ್ನು ‘ಕಾಂಗ್ರೆಸ್‌ ಬಾವಿ‘ ಎಂದು ಕರೆಯುತ್ತಾರೆ). ಈ ಎಲ್ಲ ಪ್ರಮುಖ ಅಂಶಗಳನ್ನು ಅಳವಡಿಸಿಕೊಂಡು ಸ್ತಬ್ಧಚಿತ್ರ ತಯಾರಾಗುತ್ತಿದೆ.

ಹುಯಿಲಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…’ ಗೀತೆಯನ್ನು ಮೊದಲ ಬಾರಿಗೆ ಅಧಿವೇಶನದಲ್ಲಿ ಹಾಡಲಾಗಿತ್ತು. ಇದರ ಜ್ಞಾಪಕಾರ್ಥವಾಗಿ, ಗೀತೆಯ ವಾದ್ಯಸಂಗೀತವನ್ನು ಸ್ತಬ್ಧಚಿತ್ರ ಚಲಿಸುವ ವೇಳೆ ಹಿನ್ನೆಲೆಯಾಗಿ ಬಳಸಲು ತೀರ್ಮಾನಿಸಲಾಗಿದೆ.

ನವದೆಹಲಿಯಲ್ಲಿ ನಿರ್ಮಾಣ: ಸ್ತಬ್ಧಚಿತ್ರ ನಿರ್ಮಾಣದ ಹೊಣೆಯನ್ನು ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಹಿಸಿಕೊಂಡಿದೆ. ರಾಜ್ಯದ ಪ್ರಮುಖ ಕಲಾನಿರ್ದೇಶಕ ಶಶಿಧರ ಅಡಪ ಅವರ ನೇತೃತ್ವದಲ್ಲಿ ಹಲವು ಕಲಾವಿದರು ನವದೆಹಲಿಯಲ್ಲಿ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ.

ಇದೇ ತಿಂಗಳ 20ರೊಳಗೆ ಸ್ತಬ್ಧಚಿತ್ರ ಪೂರ್ಣಗೊಳ್ಳಲಿದೆ. 22ರಂದು ರಿಹರ್ಸಲ್‌ನಲ್ಲಿ ಭಾಗವಹಿಸಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.