2019: ಖಗೋಳದಲ್ಲಿ ಹಲವು ಕೌತುಕ(ಡಿ.26ರಂದು ಸಂಭವಿಸಲಿದೆ ಕಂಕಣ ಸೂರ್ಯ ಗ್ರಹಣ l ಅಧ್ಯಯನ ನಡೆಸಲು ವಿಶೇಷ ಅವಕಾಶ)

0
649

ಆಕಾಶ ಆಸಕ್ತರಿಗೆ 2019 ಆಶಾದಾಯಕ ವರ್ಷವಾಗಿದ್ದು, ಹಲವು ಕೌತುಕಗಳನ್ನು ಕಣ್ತುಂಬಿಕೊಳ್ಳ
ಬಹುದು. ಗ್ರಹಣಗಳು, ಉಲ್ಕಾಪಾತ, ಸೂಪರ್ ಮೂನ್‌, ಮೈಕ್ರೋ ಮೂನ್‌, ಗ್ರಹ, ನಕ್ಷತ್ರಗಳ ಸೊಬಗನ್ನು ನೋಡಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್ ಆಸ್ಟ್ರೋನಮರ್ಸ್‌ ಕ್ಲಬ್‌ನ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಉಡುಪಿ: ಆಕಾಶ ಆಸಕ್ತರಿಗೆ 2019 ಆಶಾದಾಯಕ ವರ್ಷವಾಗಿದ್ದು, ಹಲವು ಕೌತುಕಗಳನ್ನು ಕಣ್ತುಂಬಿಕೊಳ್ಳಬಹುದು. ಗ್ರಹಣಗಳು, ಉಲ್ಕಾಪಾತ, ಸೂಪರ್ ಮೂನ್‌, ಮೈಕ್ರೋ ಮೂನ್‌, ಗ್ರಹ, ನಕ್ಷತ್ರಗಳ ಸೊಬಗನ್ನು ನೋಡಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್ ಆಸ್ಟ್ರೋನಮರ್ಸ್‌ ಕ್ಲಬ್‌ನ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಕಂಕಣ ಸೂರ್ಯಗ್ರಹಣ ದಕ್ಷಿಣ ಭಾರತೀಯರಿಗೆ ಬಹಳ ಅಪರೂಪ. ಹಿಂದೆ 1980ರಲ್ಲಿ ಕಂಕಣ ಗ್ರಹಣ ನೋಡುವ ಭಾಗ್ಯ ಲಭಿಸಿತ್ತು. ಮುಂದೆ ಈ ವರ್ಷದ ಡಿಸೆಂಬರ್‌ 26ರಂದು ಸಂಭವಿಸಲಿದೆ. 

ವರ್ಷದಲ್ಲಿ 4 ರಿಂದ 7 ಸೂರ್ಯ–ಚಂದ್ರ ಗ್ರಹಣ ಸಂಭವಿಸುತ್ತವೆ. ಈ ವರ್ಷ 5 ಗ್ರಹಣಗಳು ಸಂಭವಿಸಲಿವೆಯಾದರೂ ಭಾರತೀಯರಿಗೆ ಕಾಣುವುದು 2 ಮಾತ್ರ. ಜುಲೈ 16ರಂದು ಖಂಡಗ್ರಾಸ ಚಂದ್ರಗ್ರಹಣ, ಡಿಸೆಂಬರ್ 26ರಂದು ಕಂಕಣ ಸೂರ್ಯಗ್ರಹಣ. ಜ.6ರಂದು ಪಾರ್ಶ್ವ ಸೂರ್ಯಗ್ರಹಣ, ಜ.21ರಂದು ಖಗ್ರಾಸ ಚಂದ್ರಗ್ರಹಣ, ಜೂನ್ 2ರಂದು ಖಗ್ರಾಸ ಸೂರ್ಯಗ್ರಹಣ ಇದ್ದರೂ ಭಾರತದಲ್ಲಿ ಗೋಚರಿಸುವುದಿಲ್ಲ.

2020ರಿಂದ 2064ರವರೆಗೆ 6 ಪಾರ್ಶ್ವ ಸೂರ್ಯಗ್ರಹಣಗಳು ಸಂಭವಿಸಲಿವೆ. ಆದರೆ, ಖಗ್ರಾಸ ಸೂರ್ಯ ಗ್ರಹಣವನ್ನು 2064ಕ್ಕೆ ಮಾತ್ರ ವೀಕ್ಷಣೆ ಮಾಡಬಹುದು. ಈ ವರ್ಷ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದ್ದು, ಸೂರ್ಯನ ಅಧ್ಯಯನಕ್ಕೆ ವಿಜ್ಞಾನಿಗಳಿಗೆ, 
ಖಗೋಳ ಆಸಕ್ತರಿಗೆ ವಿಶೇಷ ಅವಕಾಶ ಸಿಗಲಿದೆ.

ಉಲ್ಕಾಪಾತ: ವರ್ಷದಲ್ಲಿ 12ಕ್ಕಿಂತ ಹೆಚ್ಚು ಉಲ್ಕಾಪಾತಗಳಾಗುತ್ತವೆ. ಇವುಗಳ ವೀಕ್ಷಣೆಗೆ ಚಂದ್ರನಿಲ್ಲದ ಆಕಾಶ ಬೇಕು. ಜ.3 ಹಾಗೂ 4 ರಂದು ಕ್ವಾಡರ್ನಟಿಡ್ ಉಲ್ಕಾಪಾತ ಹಾಗೂ ಮೇ 6 ಹಾಗೂ 7ರ ಈಟಾ ಅಕ್ವೇರಿಯಸ್ ಉಲ್ಕಾಪಾತವನ್ನು ಮಧ್ಯರಾತ್ರಿಯ ನಂತರ ನೋಡಿ ಖುಷಿ ಪಡಬಹುದು.

ಗ್ರಹಗಳು: ಬರಿಕಣ್ಣಿಗೆ ಕಾಣುವ ಬುಧ, ಶುಕ್ರ, ಮಂಗಳ, ಗುರು ಹಾಗೂ ಶನಿ ಗ್ರಹಗಳು ಕೆಲ ಸಮಯಗಳಲ್ಲಿ ಸುಂದರವಾಗಿರುತ್ತವೆ. ಬುಧ ಗ್ರಹವಂತೂ ಕಾಣಸಿಗುವುದೇ ಅಪರೂಪ. ವರ್ಷದಲ್ಲಿ ಮೂರು ಬಾರಿ ಸೂರ್ಯಾಸ್ತವಾದೊಡನೆ ಪಶ್ಚಿಮ ಆಕಾಶದಲ್ಲಿ ಹಾಗೂ ಮೂರು ಬಾರಿ ಸೂರ್ಯೋದಯಕ್ಕಿಂತ ಮುಂಚೆ 
ಕಾಣ ಸಿಗುತ್ತದೆ.

ಕೇವಲ 45 ನಿಮಿಷ ಮಾತ್ರ ಬುಧ ಗ್ರಹವನ್ನು ನೋಡಬಹುದು. ಈ ವರ್ಷ ಫೆ.27ರಂದು ಸಂಜೆ, ಜೂನ್ 23, ಅ.20ರಂದು ಹಾಗೂ ಪೂರ್ವ ಆಕಾಶದಲ್ಲಿ ಏ.11ರಂದು ಸೂರ್ಯೋದಯಕ್ಕಿಂತ ಮುನ್ನ, ಆ.9ರಂದು ಮತ್ತು ನವೆಂಬರ್ 28ರಂದು ವೀಕ್ಷಣೆ ಮಾಡಬಹುದು.

ಶುಕ್ರ ಗ್ರಹ: ವರ್ಷದಲ್ಲಿ 6 ತಿಂಗಳು ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಹಾಗೂ 6 ತಿಂಗಳು ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಶುಕ್ರ ಗ್ರಹ ಹೊಳೆಯುತ್ತಿರುತ್ತದೆ. ಈ ವರ್ಷ ಜುಲೈ 23ರವರೆಗೆ ಪೂರ್ವ ಆಕಾಶದಲ್ಲಿ ಹಾಗೂ ಸೆ.18ರಿಂದ ಸಂಜೆ ಪಶ್ಚಿಮ ಆಕಾಶದಲ್ಲಿ ಕಾಣಿಸಲಿದ್ದಾನೆ. ಜ.6ರಂದು ಪೂರ್ವ ಆಕಾಶದಲ್ಲಿ ಅತೀ ಎತ್ತರದಲ್ಲಿ ನೋಡಬಹುದು.

ಮಂಗಳ ಗ್ರಹ: ಜೂನ್‌ವರೆಗೂ ಸಂಜೆ ಆಕಾಶದಲ್ಲಿ ನಡುನೆತ್ತಿಯಿಂದ ಪೂರ್ವಕ್ಕೆ ಕಾಣಿಸುವ ಮಂಗಳ ಆಗಸ್ಟ್‌ನಿಂದ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣುವನು.

ಗುರು ಗ್ರಹ: ಜೂನ್ ತಿಂಗಳಿನಲ್ಲಿ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಇಡೀ ರಾತ್ರಿ ಕಾಣುತ್ತಾನೆ. ದೂರದರ್ಶಕದಲ್ಲಿ ಗುರು ಗ್ರಹದ ಮೇಲ್ಮೈ ಹಾಗೂ ಅದರ ಚಂದ್ರನ ಸೊಬಗು ಅನಾವರಣಗೊಳ್ಳಲಿದೆ.

ಶನಿ ಗ್ರಹ: ಜುಲೈನಲ್ಲಿ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುತ್ತಾನೆ. ಆಗ ಶನಿಯ ಬಳೆಗಳು ದೂರದರ್ಶಕದಲ್ಲಿ ಅತಿ ಸುಂದರವಾಗಿ ಕಾಣಲಿವೆ. ಅಮಾವಾಸ್ಯೆಯ ಸಮೀಪ ನಕ್ಷತ್ರ ಪುಂಜಗಳು, ನಕ್ಷತ್ರ ಗುಚ್ಛಗಳು, ಆಕಾಶಗಂಗೆಗಳನ್ನು ನೋಡಲು ಅವಕಾಶ ಇದೆ. ಚಂದ್ರನಿಲ್ಲದ ಆಕಾಶದ ರಾತ್ರಿ ಇವೆಲ್ಲವುಗಳ ಸೊಬಗನ್ನು ಸವಿಯಬಹುದು.

ತಿಂಗಳಿನಲ್ಲಿ ಹುಣ್ಣಿಮೆ, ಅಮಾವಾಸ್ಯೆ ಬರುತ್ತವೆಯಾದರೂ ಕೆಲವು ಹುಣ್ಣಿಮೆಗಳು ಭವ್ಯವಾಗಿರುತ್ತವೆ. ದೀರ್ಘ ವೃತ್ತದ ಅಕ್ಷದಲ್ಲಿ ಭೂಮಿಯನ್ನು ಸುತ್ತುವ ಚಂದ್ರ ಭೂಮಿಗೆ ಸಮೀಪ ಬಂದಾಗ ಆಕರ್ಷಕವಾಗಿ ಕಾಣುತ್ತದೆ.

ಈ ಅವಧಿಯಲ್ಲಿ ಚಂದ್ರ 14 ಪಟ್ಟು ದೊಡ್ಡದಾಗಿ ಕಂಡರೆ, 24 ಅಂಶ ಹೆಚ್ಚಿನ ಪ್ರಭೆಯಲ್ಲಿ ಗೋಚರಿ
ಸುತ್ತಾನೆ. ಇಂತಹ ಹುಣ್ಣಿಮೆಗಳಿಗೆ ಸೂಪರ್ ಮೂನ್‌ ಎನ್ನುತ್ತಾರೆ. ಈ ವರ್ಷ ಜ.21 ರಂದು (3,57,715 ಕಿ.ಮೀ), ಫೆ.19 ರಂದು (3,56,846 ಕಿ.ಮೀ), ಹಾಗೂ ಮಾರ್ಚ್ 21 ರಂದು (3,60,772 ಕಿ.ಮೀ) ಸೂಪರ್ ಮೂನ್‌ ಕಾಣಸಿಗಲಿದೆ.

ಭೂಮಿ ಚಂದ್ರನ ನಡುವಿನ ಸರಾಸರಿ ದೂರ 3,84,000 ಕಿ.ಮೀ ಆಗಿದ್ದು, ದೀರ್ಘ ವೃತ್ತದಲ್ಲಿ ಹುಣ್ಣಿಮೆ ಬಂದರೆ ಚಂದ್ರ ಮಾಮೂಲಿಗಿಂತ ಚಿಕ್ಕದಾಗಿ ಕಾಣುತ್ತಾನೆ. ಈ ಹುಣ್ಣಿಮೆಗೆ ಮೈಕ್ರೋ ಮೂನ್ ಎನ್ನುವರು. ಈ ವರ್ಷ ಸೆ. 14ರಂದು ಹುಣ್ಣಿಮೆ ಮೈಕ್ರೋ ಮೂನ್ ಅನ್ನು (4,06,377 ಕಿ.ಮೀ) ದೂರದಲ್ಲಿ ನೋಡಬಹುದು.