2019ನೇ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡ “ಸುಮನ್​ ರಾವ್”

0
119

ರಾಜಸ್ಥಾನ ಮೂಲದ ಸುಮನ್​ ರಾವ್ ಎಂಬುವರು​ 2019ರ ಫೆಮಿನಾ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟಕ್ಕೆ ಭಾಜನರಾಗಿದ್ದಾರೆ.

ನವದೆಹಲಿ: ರಾಜಸ್ಥಾನ ಮೂಲದ ಸುಮನ್​ ರಾವ್ ಎಂಬುವರು​ 2019ರ ಫೆಮಿನಾ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟಕ್ಕೆ ಭಾಜನರಾಗಿದ್ದಾರೆ.

ಚತ್ತೀಸ್​ಗಢದ ಶಿವಾನಿ ಜಾಧವ್​ ಎಂಬುವರು 2019ರ ಫೆಮಿನಾ ಮಿಸ್​ ಗ್ರ್ಯಾಂಡ್​ ಇಂಡಿಯಾ ಟೈಟಲ್​ ಮುಡಿಗೇರಿಸಿಕೊಂಡರೆ, ಬಿಹಾರದ ಶ್ರೇಯಾ ಶಂಕರ್​ 2019ರ ಮಿಸ್​ ಇಂಡಿಯಾ ಯುನೈಟೆಡ್​ ಕಾಂಟಿನೆಂಟ್ಸ್​ ಕಿರೀಟವನ್ನು ತಮ್ಮದಾಗಿಸಿಕೊಂಡರು. ಮುಂಬೈನ ಸರ್ದಾರ್​​ ವಲ್ಲಭಾಯ್​ ಪಟೇಲ್​ ಇಂಡೋರ್​ ಸ್ಟೇಡಿಯಂನಲ್ಲಿ ಜೂನ್ 14 ರ ಶನಿವಾರ ನಡೆದ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಪ್ಪತ್ತರ ಹರೆಯದ ಸುಮನ್​ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಥೈಲ್ಯಾಂಡ್​ನಲ್ಲಿ ನಡೆಯಲಿರುವ 2019ನೇ ಮಿಸ್​ ವರ್ಲ್ಡ್​​ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಒಂದು ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಅದರೆಡೆಗೆ ಮುನ್ನುಗಿದರೆ, ನಿಮ್ಮ ದೇಹದ ಪ್ರತಿಯೊಂದು ಅಂಗಾಗವೂ ನಿಮ್ಮ ಗುರಿಯನ್ನು ಮುಟ್ಟುವ ಕಡೆಗೆ ಕೆಲಸ ಮಾಡಲು ಆರಂಭಿಸುತ್ತದೆ ಎಂದು ಸುಮನ್​ ರಾವ್​ ಗೆಲುವಿನ ನುಡಿಯನ್ನು ತಿಳಿಸಿದ್ದಾರೆ.

ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮದಲ್ಲಿ ಬಾಲಿವುಡ್​ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರು ಮುಖ್ಯ ತೀರ್ಪುಗಾರರಾಗಿದ್ದರು. ನಟಿ ಹುಮಾ ಖುರೇಷಿ, ಚಿತ್ರಾಂಗಧ ಸಿಂಗ್​ ಹಾಗೂ ಫ್ಯಾಷನ್​ ಡಿಸೈನರ್​ ಫಲ್ಗುಣಿ ಶೇನ್​ ಪಿಕಾಕ್​ ಮತ್ತು ಭಾರತೀಯ ಫುಟ್​ಬಾಲರ್​ ಸುನಿಲ್​ ಛೆಟ್ರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದ್ಧೂರಿ ಕಾರ್ಯಕ್ರಮದಲ್ಲಿ ಮನರಂಜನೆಗೂ ಕೊರತೆ ಇರಲಿಲ್ಲ. ನಟಿ ಕತ್ರಿನಾ ಕೈಫ್​, ವಿಕಿ ಕುಶಾಲ್​ ಮತ್ತು ಮೌನಿ ರಾಯ್​ ತಮ್ಮ ನೃತ್ಯದಿಂದ ಅಲ್ಲಿ ನೆರೆದಿದ್ದವರನ್ನು ರಂಜಿಸಿದರು. ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ಮತ್ತು ಮನಿಶ್​ ಪೌಲ್​ ಅವರು ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು. (ಏಜೆನ್ಸೀಸ್​)