2018 ರ ಯೂತ್ ಒಲಿಂಪಿಕ್ಸ್‌ : ಭಾರತದ ಬ್ಯಾಡ್ಮಿಂಟನ್ ಪಟು “ಲಕ್ಷ್ಯ ಸೇನ್‌”ಗೆ ಬೆಳ್ಳಿ ಪದಕ

0
521

ಭಾರತ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್‌ ಇಲ್ಲಿ ನಡೆಯುತ್ತಿರುವ ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಅಕ್ಟೋಬರ್ 12 ರ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ಚೀನಾದ ಲೀ ಶಿಫೆಂಗ್‌ಗೆ 15–21, 19–21ರಿಂದ ಮಣಿದರು.

ಬ್ಯೂನಸ್ ಐರಿಸ್‌, ಅರ್ಜೆಂಟೀನಾ (ಪಿಟಿಐ): ಭಾರತ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್‌ ಇಲ್ಲಿ ನಡೆಯುತ್ತಿರುವ ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಅಕ್ಟೋಬರ್ 12 ರ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು ಚೀನಾದ ಲೀ ಶಿಫೆಂಗ್‌ಗೆ 15–21, 19–21ರಿಂದ ಮಣಿದರು.

ಜುಲೈನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಲಕ್ಷ್ಯ ಸೇನ್ ಅವರು ಶೀಫೆಂಗ್ ಎದುರು ಗೆದ್ದಿದ್ದರು. ಆ ಸೋಲಿಗೆ ಚೀನಾ ಆಟಗಾರ ಶುಕ್ರವಾರ ಪ್ರತೀಕಾರ ತೀರಿಸಿದರು. 42 ನಿಮಿಷಗಳ ಹಣಾಹಣಿಯ ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಸುಲಭವಾಗಿ ಸೋತರೂ ನಿರ್ಣಾಯಕ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಲು ಯತ್ನಿಸಿದರು. ಆದರೆ ಛಲ ಬಿಡದೆ ಕಾದಾಡಿದ ಶಿಫೆಂಗ್‌ ಪಂದ್ಯ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಆರಂಭದಲ್ಲೇ ಅಬ್ಬರಿಸಿದ ಶೀಫೆಂಗ್‌ ನಿರಂತರ ಪಾಯಿಂಟ್‌ಗಳನ್ನು ಗಳಿಸಿ 14–5ರಿಂದ ಮುನ್ನಡೆದರು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಲಕ್ಷ್ಯ ಸೇನ್‌ ಪ್ರತಿ ಹೋರಾಟ ನಡೆಸಿ ಹಿನ್ನಡೆಯನ್ನು 13–16ಕ್ಕೆ ಕುಗ್ಗಿಸಿದರು. ನಂತರವೂ ಅಮೋಘ ಆಟ ಮುಂದುವರಿಸಿದ ಶೀಫೆಂಗ್‌ 18–13 ಮತ್ತು 20–14ರಿಂದ ಮುನ್ನಡೆದರು. ನಂತರ ಲಕ್ಷ್ಯ ಸೇನ್‌ಗೆ ಒಂದು ಗೇಮ್ ಪಾಯಿಂಟ್‌ ಉಳಿಸಲಷ್ಟೇ ಸಾಧ್ಯವಾಯಿತು. ಮುಂದಿನ ಪಾಯಿಂಟ್ ತಮ್ಮದಾಗಿಸಿಕೊಂಡ ಚೀನಾ ಆಟಗಾರ ಗೇಮ್‌ ಗೆದ್ದರು.

ತೀವ್ರ ಪೈಪೋಟಿ: ಎರಡನೇ ಗೇಮ್‌ನಲ್ಲಿ ಉಭಯ ಆಟಗಾರರು ತೀವ್ರ ಪೈಪೋಟಿ ನಡೆಸಿದರು. ಆರಂಭದಲ್ಲಿ ಇಬ್ಬರೂ ಜಿದ್ದಿಗೆ ಬಿದ್ದು ಪಾಯಿಂಟ್ ಗಳಿಸಿದರು. ಲಕ್ಷ್ಯ ಸೇನ್‌ ಏಳು ಪಾಯಿಂಟ್ ಗಳಿಸಿದ್ದಾಗ ಒಂದು ಪಾಯಿಂಟ್‌ ಮುನ್ನಡೆ ಹೊಂದಿದ್ದ ಶೀಫೆಂಗ್‌ ನಂತರ ಈ ಅಂತರವನ್ನು 12–7ಕ್ಕೇರಿಸಿದರು. ನಂತರ 14–11, 18–14, 19–14ರಿಂದ ಮುನ್ನುಗ್ಗಿದರು.

ಈ ವೇಳೆ ಪಂದ್ಯದಲ್ಲಿ ಜೀವಂತವಾಗಿ ಉಳಿಯಲು ಕೊನೆಯ ಪ್ರಯತ್ನ ನಡೆಸಿದ ಲಕ್ಷ್ಯ ಸತತ ಮೂರು ಪಾಯಿಂಟ್ ಗಳಿಸಿದರು. ಆದರೂ ಎದುರಾಳಿಯ ನಾಗಾಲೋಟಕ್ಕೆ ಲಗಾಮು ಹಾಕಲು ಅವರಿಗೆ ಸಾಧ್ಯವಾಗಲಿಲ್ಲ.