2018 ರ ಯೂತ್‌ ಒಲಿಂಪಿಕ್ಸ್‌: ಸಿಮ್ರನ್‌ಗೆ ಬೆಳ್ಳಿ

0
94

ಭಾರತದ ಕುಸ್ತಿಪಟು ಸಿಮ್ರನ್‌ ಅವರು 2018 ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ
ಕೊರಳೊಡ್ಡಿದ್ದಾರೆ.

ಬ್ಯೂನಸ್‌ ಐರಿಸ್‌ (ಪಿಟಿಐ): ಭಾರತದ ಕುಸ್ತಿಪಟು ಸಿಮ್ರನ್‌ ಅವರು ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಅಕ್ಟೋಬರ್ 13 ರ ಶನಿವಾರ ರಾತ್ರಿ ನಡೆದ ಮಹಿಳೆಯರ 43 ಕೆ.ಜಿ.ಫ್ರೀಸ್ಟೈಲ್‌ ವಿಭಾಗದಲ್ಲಿ ಅವ ರಿಂದ ಈ ಸಾಧನೆ ಮೂಡಿಬಂದಿದೆ.

ಫೈನಲ್‌ನಲ್ಲಿ ಸಿಮ್ರನ್‌ 6–11 ಪಾಯಿಂಟ್ಸ್‌ನಿಂದ ಅಮೆರಿಕದ ಎಮಿಲಿ ಶಿಲ್ಸನ್‌ ವಿರುದ್ಧ ಪರಾಭವಗೊಂಡರು.

ಮೊದಲ ಅವಧಿಯಲ್ಲಿ ಶಿಲ್ಸನ್‌ ಪ್ರಾಬಲ್ಯ ಮೆರೆದರು. ಬಿಗಿಪಟ್ಟುಗಳ ಮೂಲಕ ಭಾರತದ ಕುಸ್ತಿಪಟುವನ್ನು ಮ್ಯಾಟ್‌ ಮೇಲೆ ಉರುಳಿಸಿದ ಅವರು 9–2ರಲ್ಲಿ ಮುನ್ನಡೆ ಗಳಿಸಿದರು.

ಎರಡನೇ ಅವಧಿಯಲ್ಲಿ ಸಿಮ್ರನ್‌ ಉತ್ತಮ ಸಾಮರ್ಥ್ಯ ತೋರಿದರು. ನಾಲ್ಕು ಪಾಯಿಂಟ್ಸ್‌ ಗಳಿಸಿದ ಅವರು ಹಿನ್ನಡೆ ತಗ್ಗಿಸಿಕೊಳ್ಳಲಷ್ಟೇ ಶಕ್ತರಾದರು.

ಸಿಮ್ರನ್‌ ಅವರು 2017ರ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನ 40 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಶಿಲ್ಸನ್‌ 2018ರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಫೈನಲ್‌ಗೆ ಭಾರತ ತಂಡಗಳು: 5 ಎ ಸೈಡ್‌ ಹಾಕಿಯಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡದವರು ಫೈನಲ್‌ ಪ್ರವೇಶಿಸಿದರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಪುರುಷರ ತಂಡ 3–1 ಗೋಲುಗಳಿಂದ ಅರ್ಜೆಂಟೀನಾವನ್ನು ಮಣಿಸಿತು.

ರಾಹುಲ್‌ ಕುಮಾರ್‌ ರಾಜಭರ್‌ ಮೂರನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ನಂತರ ಸುದೀಪ್‌ ಚಿರಮಾಕೊ ಕೈಚಳಕ ತೋರಿದರು. ಅವರು 12 ಮತ್ತು 18ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

ಮಹಿಳಾ ವಿಭಾಗದ ನಾಲ್ಕರ ಘಟ್ಟದ ಹೋರಾಟದಲ್ಲಿ ಭಾರತ 3–0 ಗೋಲುಗಳಿಂದ ಚೀನಾ ಎದುರು ಗೆದ್ದಿತು.