2018 ರ ನವೆಂಬರ್‌ 1ರಿಂದ ಮುಲಾಮು ಖರೀದಿಗೆ ಚೀಟಿ ಕಡ್ಡಾಯ

0
26

ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್‌ ಇರುವ ಕ್ರೀಮ್‌ ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ. ಚರ್ಮರೋಗ ತಜ್ಞ ವೈದ್ಯರ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ: ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್‌ ಇರುವ ಕ್ರೀಮ್‌ ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ. ಚರ್ಮರೋಗ ತಜ್ಞ ವೈದ್ಯರ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್‌ 1ರಿಂದ ಇದು ಜಾರಿಗೆ ಬರಲಿದೆ.

ಕ್ರೀಮ್‌ ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದಕ್ಕೆ ಅವಕಾಶ ಇತ್ತು. ಇದನ್ನು ದುರುಪಯೋಗಪಡಿಸಿಕೊಂಡು ಸ್ಟಿರಾಯ್ಡ್‌ ಇರುವ ಮುಲಾಮುಗಳನ್ನು ಕೇಳಿದವರಿಗೆಲ್ಲ ಮಾರಾಟ ಮಾಡಲಾಗುತ್ತಿತ್ತು. ಪರಿಣಾಮವಾಗಿ ಗಜಕರ್ಣದಂತಹ (ರಿಂಗ್ ವರ್ಮ್‌) ಚರ್ಮದ ಸೋಂಕುಗಳು ದೇಶದಾದ್ಯಂತ ಸಾಂಕ್ರಾಮಿಕದಂತೆ ಹರಡಿವೆ ಎಂದು ಹೇಳಲಾಗಿದೆ.

ಇಂತಹ ಮುಲಾಮುಗಳ ಮೇಲೆ ‘ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವಂತಿಲ್ಲ’ ಎಂಬುದನ್ನು ಬರೆಯಬೇಕು ಎಂದೂ ತಿಳಿಸಲಾಗಿದೆ.

ಚರ್ಮ ರೋಗಗಳು ಮತ್ತು ಲೈಂಗಿಕ ಸಂಪರ್ಕದ ರೋಗಗಳ ತಜ್ಞ ವೈದ್ಯರ ಸಂಘವು (ಐಎಡಿವಿಎಲ್‌) ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿತ್ತು. ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಂಘವು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

‘ಅಸಂಬದ್ಧ ಸಂಯೋಜನೆಗಳನ್ನು ಹೊಂದಿರುವ 353 ಮುಲಾಮು ಬ್ರಾಂಡುಗಳಿವೆ. ಇವುಗಳಲ್ಲಿ ಹೆಚ್ಚಿನವು ಚರ್ಮ ಬೆಳ್ಳಗಾಗುವ ಕ್ರೀಮ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಇಂತಹ ಕ್ರೀಮ್‌ಗಳನ್ನು ಬಳಸುವ ಶೇ 20ರಿಂದ 25ರಷ್ಟು ಜನರಲ್ಲಿ ಸೋಂಕುಗಳು ಸಾಮಾನ್ಯವಾಗಿವೆ’ ಎಂದು ಐಎಡಿವಿಎಲ್‌ ಅಧ್ಯಕ್ಷ ಮತ್ತು ಮಂಗಳೂರಿನ ಚರ್ಮರೋಗ ತಜ್ಞ ರಮೇಶ್‌ ಭಟ್‌ ಹೇಳಿದ್ದಾರೆ.