2018 ಯೂತ್‌ ಒಲಿಂಪಿಕ್ಸ್‌:ಬೆಳ್ಳಿಗೆ ಕೊರಳೊಡ್ಡಿದ ಪನ್ವಾರ್‌

0
585

ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೂರಜ್‌ ಪನ್ವಾರ್‌, ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬ್ಯೂನಸ್‌ ಐರಿಸ್‌ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಭಾರತದ ಸೂರಜ್‌ ಪನ್ವಾರ್‌, ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ರಾತ್ರಿ ನಡೆದ ಪುರುಷರ 5000 ಮೀಟರ್ಸ್‌ ನಡಿಗೆ ಸ್ಪರ್ಧೆಯಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿದೆ. ಪನ್ವಾರ್‌ ಒಟ್ಟು 40 ನಿಮಿಷ 59.17 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಭಾರತದ 17 ವರ್ಷ ವಯಸ್ಸಿನ ಅಥ್ಲೀಟ್‌ ಮೊದಲ ಹಂತದಲ್ಲಿ 20 ನಿಮಿಷ 23.30 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಎರಡನೇ ಹಂತದಲ್ಲೂ ಉತ್ತಮ ಸಾಮರ್ಥ್ಯ ತೋರಿದ ಅವರು 20 ನಿಮಿಷ 35.87 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಬೆಳ್ಳಿಯ ಪದಕ ಜಯಿಸಿದರು.

ಈಕ್ವೆಡರ್‌ನ ಪ್ಯಾಟಿನ್‌ ಆಸ್ಕರ್‌ (40ನಿಮಿಷ, 51.86 ಸೆಕೆಂಡು) ಈ ವಿಭಾಗದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಮೊದಲ ಹಂತದ ಸ್ಪರ್ಧೆಯನ್ನು 20 ನಿಮಿಷ 13. 69 ಸೆಕೆಂಡುಗಳಲ್ಲಿ ಪೂರೈಸಿದ್ದ ಅವರು ಎರಡನೇ ಹಂತದಲ್ಲಿ 20 ನಿಮಿಷ 38.17 ಸೆಕೆಂಡುಗಳಲ್ಲಿ ಗುರಿ ತಲುಪಿ ಸಂಭ್ರಮಿಸಿದರು.

ಪೋರ್ಟೊರಿಕಾದ ಜಾನ್‌ ಮೊರೆವು ಈ ವಿಭಾಗದ ಕಂಚಿನ ಪದಕ ಪಡೆದರು.

ಯೂತ್‌ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತ ಗೆದ್ದ ಒಟ್ಟಾರೆ ಮೂರನೇ ಪದಕ ಇದಾಗಿದೆ. 2010ರಲ್ಲಿ ಅರ್ಜುನ್‌ (ಡಿಸ್ಕಸ್‌ ಥ್ರೋ) ಮತ್ತು ದುರ್ಗೇಶ್‌ ಕುಮಾರ್‌ (400 ಮೀಟರ್ಸ್‌ ಹರ್ಡಲ್ಸ್‌) ಅವರು ಬೆಳ್ಳಿಯ ಸಾಧನೆ ಮಾಡಿದ್ದರು.

‘ಯೂತ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಅತೀವ ಖುಷಿ ನೀಡಿದೆ. ಕೂಟಕ್ಕೂ ಮುನ್ನ ಕಠಿಣ ತಾಲೀಮು ನಡೆಸಿದ್ದೆ. ಹೀಗಾಗಿ ಯಶಸ್ಸು ಗಳಿಸಲು ಸಾಧ್ಯವಾಯಿತು. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಸೀನಿಯರ್‌ ಹಂತದಲ್ಲೂ ಪದಕ ಜಯಿಸುವುದು ನನ್ನ ಗುರಿ. ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಂಡು ಸಾಗುತ್ತೇನೆ’ ಎಂದು ಪನ್ವಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.