2018: ಚಂದ್ರ ಗ್ರಹಣದ ವಿಶೇಷ ಅತಿಥಿ ಮಂಗಳ ಗ್ರಹ!

0
44

ಇಂದು ರಾತ್ರಿ 11 ಗಂಟೆಗೆ ಸಂಭವಿಸಲಿರುವ ಶತಮಾನದಲ್ಲೇ ಅತ್ಯಂತ ದೀರ್ಘಾವಧಿ ಎನ್ನಲಾಗದ ಖಗ್ರಾಸ ಚಂದ್ರ ಗ್ರಹಣ ವೀಕ್ಷಣೆಗೆ ಖುದ್ದು ಮಂಗಳ ಗ್ರಹ ಆಗಮಿಸುತ್ತಿದೆ!

ಇಂದು ರಾತ್ರಿ 11 ಗಂಟೆಗೆ ಸಂಭವಿಸಲಿರುವ ಶತಮಾನದಲ್ಲೇ ಅತ್ಯಂತ ದೀರ್ಘಾವಧಿ ಎನ್ನಲಾಗದ ಖಗ್ರಾಸ ಚಂದ್ರ ಗ್ರಹಣ ವೀಕ್ಷಣೆಗೆ ಖುದ್ದು ಮಂಗಳ ಗ್ರಹ ಆಗಮಿಸುತ್ತಿದೆ! 

ಕಾಕತಾಳಿಯವೋ, ಬಾಹ್ಯಾಕಾಶದ ವೈಚಿತ್ರ್ಯವೋ, ಚಂದ್ರ ಗ್ರಹಣದ ವೇಳೆ ಮಂಗಳ ಗ್ರಹವು ಭೂಮಿಯನ್ನು ಅತ್ಯಂತ ಸಮೀಪಿಸಲಿದೆ. ಕಳೆದ 15 ವರ್ಷಗಳಿಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಮೀಪಗೊಳ್ಳುತ್ತಿದೆ. 2003ರಲ್ಲಿ ಮಂಗಳ ಅತ್ಯಂತ ಹತ್ತಿರದಲ್ಲಿ ಗೋಚರಿಸಿತ್ತು. 

ಒಂದೆಡೆ ಚಂದ್ರ ಗ್ರಹಣ ಸಂಭವಿಸುತ್ತಿರುವ ವೇಳೆಯಲ್ಲೇ ಮಂಗಳ ಗ್ರಹವು ಭೂಮಿಯಿಂದ ಸುಮಾರು 359 ಲಕ್ಷ ಮೈಲಿಯಷ್ಟು ದೂರದಲ್ಲಿ ಕಾಣಿಸಿಕೊಳ್ಳಲಿದೆ. ಈ ಸಂದರ್ಭ ಸೂರ್ಯ ಮತ್ತು ಮಂಗಳ ಗ್ರಹಗಳ ನಡುವೆ ಭೂಮಿಯಿರಲಿದೆ. ಇದನ್ನು ಅಪೋಸಿಷನ್‌ ಅಥವಾ ವೈರುತ್ಯ ಎನ್ನುತ್ತಾರೆ. ಮಂಗಳ ಗ್ರಹ ಭೂಮಿಯನ್ನು ಸಮೀಪಿಸುತ್ತಿರುವುದರಿಂದ ಶುಕ್ರವಾರ ಬೆಳ್ಳಂಬೆಳಗ್ಗೆ ಆಕಾಶದಲ್ಲಿ ಹೊಂಬಣ್ಣದ ಪ್ರಕಾಶತೆ ಆವರಿಸುತ್ತದೆ. ಅಮೆರಿಕ, ಯುರೋಪ್‌ ರಾಷ್ಟ್ರಗಳಲ್ಲಿ ಮಂಗಳ ಗ್ರಹವನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. 

ಮಂಗಳ ಭೂಮಿ ಸಮೀಪಿಸಿದಾಗ ಏನೇನಾಗುತ್ತದೆ? 

ಮಂಗಳ ಗ್ರಹವು ಭೂಕಕ್ಷೆಗೆ ಸಮೀಪಿಸಿದಾಗ, ಸೂರ್ಯಾಸ್ತ ವೇಳೆಗೆ ಮಂಗಳ ಗ್ರಹದ ಉದಯವಾಗುತ್ತದೆ. ಹಾಗೆಯೇ ಸೂರ್ಯೋದಯದ ವೇಳೆಗೆ ಮಂಗಳ ಅಸ್ತಮಿಸುತ್ತದೆ. ಅಂದರೆ ಭೂಮಿಯಿಂದ ವೀಕ್ಷಿಸಿದಾಗ ಸೂರ್ಯ ಮತ್ತು ಮಂಗಳ ಎದುರುಬದುರಾಗಿ ಚಲಿಸುವಂತೆ. ಮಂಗಳ ಗ್ರಹವು ಸಹಜವಾಗೇ ಅತ್ಯಂತ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ. ಜುಲೈ 31ಕ್ಕೆ ಮಂಗಳ ಗ್ರಹವು ಭೂಮಿಗೆ ಅತ್ಯಂತ ಹತ್ತಿರವಾಗುತ್ತದೆ. 

ಚಂದ್ರ ಗ್ರಹಣದ ಸಂಭಾವ್ಯ ಚಿತ್ರಣ 
ಚಂದ್ರ ಗ್ರಹಣವು ಸುಮಾರು 1 ಗಂಟೆ 43 ನಿಮಿಷಗಳ ವರೆಗೆ ಭಾರತದ ಬಹುತೇಕ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಮಳೆ ಮತ್ತು ಮೋಡದ ಅಡಚಣೆಯಿಂದ ಗ್ರಹಣ ವೀಕ್ಷಿಸುವ ಅಪೇಕ್ಷೆಗೆ ತಡೆಯಾಗಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. 

‘ರಾತ್ರಿ 10.53ಕ್ಕೆ ಚಂದ್ರನು ಭೂಮಿಯ ಪಿನುಂಬ್ರಲ್‌ ನೆರಳನ್ನು ಪ್ರವೇಶಿಸಲಿದೆ. ಪ್ರಾರಂಭದ 30-40 ನಿಮಿಷಗಳ ವರೆಗೆ ಬರಿಗಣ್ಣಿಗೆ ಕಾಣಿಸುವುದು ಕಷ್ಟಸಾಧ್ಯ. ಆ ನಂತರ ಚಂದ್ರನ ಪ್ರಕಾಶತೆಯಲ್ಲಿ ಬದಲಾವಣೆಯನ್ನು ಗ್ರಹಿಸಬಹುದು’ ಎನ್ನುತ್ತಾರೆ ನೆಹರೂ ಪ್ಲಾನಟೇರಿಯಂನ ನಿರ್ದೇಶಕಿ ಎನ್‌ ರತ್ನಾಶ್ರೀ. ಇಲ್ಲಿ ಪಿನುಂಬ್ರಲ್‌ ಎಂದರೆ ಬಹುತೇಕ ಸಮೀಪವಾಗಿ ಎಂದರ್ಥ. ಬೆಳಕಿನ ಮೂಲ ವಸ್ತುವಿಗೆ ಅಡ್ಡ ಬರುವುದು ಎಂಬರ್ಥವನ್ನು ಕೊಡುತ್ತದೆ. 

ರಾತ್ರಿ 11.54ಕ್ಕೆ ಚಂದ್ರನು ಭೂಮಿಯ ಉಂಬ್ರಾ ನೆರಳನ್ನು ಪ್ರವೇಶಿಸುತ್ತಾನೆ. ಈ ವೇಳೆ ಚಂದ್ರನ ಬಿಂಬದಲ್ಲಿ ದಟ್ಟ ನೆರಳು ಕಾಣಿಸಿಕೊಳ್ಳುತ್ತದೆ. ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯ. ಉಂಬ್ರಾ ಎಂದರೆ ನೆರಳಿನ ಒಳಭಾಗ ಅಥವಾ ದಟ್ಟ ಭಾಗವಾಗಿದೆ. ಬೆಳಕಿನ ಪ್ರವೇಶಕ್ಕೆ ಸಂಪೂರ್ಣ ತಡೆಯೊಡ್ಡುವ ಪ್ರಕ್ರಿಯೆಯಿದು. 

ಮಧ್ಯ ರಾತ್ರಿ 1 ಗಂಟೆಗೆ ಭೂಮಿಯ ಉಂಬ್ರಾ ನೆರಳನ್ನು ಸಂಪೂರ್ಣವಾಗಿ ಪ್ರವೇಶಿಸುತ್ತದೆ. ಈ ವೇಳೆ ಚಂದ್ರನ ಬಿಂಬವು ಕೆಂಪಾಗುತ್ತದೆ. ಮಧ್ಯ ರಾತ್ರಿ 1.51ಕ್ಕೆ ಗ್ರಹಣದ ಗರಿಷ್ಠತೆಯನ್ನು ತಲುಪುತ್ತದೆ. ಸಂಪೂರ್ಣ ಗ್ರಹಣವು ಮುಂಜಾನೆ 2.43ಕ್ಕೆ ಅಂತ್ಯಗೊಳ್ಳುತ್ತದೆ. 3.49ಕ್ಕೆ ಚಂದ್ರ ಭೂಮಿಯ ಉಂಬ್ರಾ ನೆರಳಲ್ಲಿರುತ್ತದೆ. ಬೆಳಗ್ಗೆ 5 ಗಂಟೆಯ ವೇಳೆಗೆ ಚಂದ್ರ ಸಂಪೂರ್ಣವಾಗಿ ಗ್ರಹಣಮುಕ್ತನಾಗಿ ಹೊರಗೆ ಬರುತ್ತಾನೆ ಎಂದು ರತ್ನಾಶ್ರೀ ವಿವರಣೆ ನೀಡಿದ್ದಾರೆ.