2018 ಏಷ್ಯನ್ ಪ್ಯಾರಾ ಕ್ರೀಡಾಕೂಟ: ಶರದ್​ಕುಮಾರ್​ಗೆ ಸ್ವರ್ಣ

0
584

ಹಾಲಿ ಚಾಂಪಿಯನ್ ಶರದ್ ಕುಮಾರ್ ಪ್ಯಾರಾ ಏಷ್ಯಾಡ್​ನಲ್ಲಿ ಅವಳಿ ದಾಖಲೆಯೊಂದಿಗೆ ಪುರುಷರ ಹೈಜಂಪ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ.

ಜಕಾರ್ತ: ಹಾಲಿ ಚಾಂಪಿಯನ್ ಶರದ್ ಕುಮಾರ್ ಪ್ಯಾರಾ ಏಷ್ಯಾಡ್​ನಲ್ಲಿ ಅವಳಿ ದಾಖಲೆಯೊಂದಿಗೆ ಪುರುಷರ ಹೈಜಂಪ್ ವಿಭಾಗದಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ಟಿ42/63 ವಿಭಾಗದಲ್ಲಿ ಸತತ 2ನೇ ಬಾರಿ ಪದಕ ಜಯಿಸಿದ ಅವರು ಭಾರತಕ್ಕೆ ಕೂಟದ 8ನೇ ಚಿನ್ನ ತಂದುಕೊಟ್ಟರು. ಈ ವಿಭಾಗದ ಮೂರೂ ಪದಕಗಳು ಭಾರತದ ಪಾಲಾಗಿದ್ದು ವಿಶೇಷ. ಕರ್ನಾಟಕದ ರಾಧಾ ವೆಂಕಟೇಶ್ ಮಹಿಳೆಯರ 400 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಕಂಚು ಗೆದ್ದ ಸಾಧನೆ ಮಾಡಿದರು. ಕೂಟದ 6ನೇ ದಿನವಾದ ಗುರುವಾರ ಭಾರತ ಒಂದು ಚಿನ್ನ, 4 ಬೆಳ್ಳಿ ಹಾಗೂ 8 ಕಂಚು ಗೆದ್ದುಕೊಂಡಿತು. ಇದರಿಂದ ಕೂಟದಲ್ಲಿ ಭಾರತ ಜಯಿಸಿದ ಪದಕಗಳ (8 ಚಿನ್ನ, 17 ಬೆಳ್ಳಿ, 25 ಕಂಚು) ಸಂಖ್ಯೆ 50ಕ್ಕೇರಿದೆ.

ಡಬಲ್ ದಾಖಲೆ ಬರೆದ ಶರದ್: ಬಿಹಾರ ಮೂಲದ 26 ವರ್ಷದ ಶರದ್ ಕುಮಾರ್, ಅಸಮತೋಲನದಿಂದ ಕೂಡಿದ ಕಾಲುಗಳ್ಳುವರಿಗೆ ನಡೆಯುವ ಹೈಜಂಪ್​ನಲ್ಲಿ 1.90 ಮೀ. ಹಾರಿ ಚಿನ್ನ ಗೆದ್ದರು. 2014ರ ಇಂಚೋನ್ ಕೂಟದಲ್ಲೂ ಶರದ್ ಸ್ವರ್ಣ ಗೆದ್ದಿದ್ದರು. ಈ ವಿಭಾಗದಲ್ಲಿ ಭಾರತದವರೇ ಆದ ರಿಯೋ ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೇತ ವರುಣ್ ಭಟಿ (1.82 ಮೀ) ಹಾಗೂ ರಿಯೋ ಪ್ಯಾರಾಲಿಂಪಿಕ್ ಸ್ವರ್ಣ ಸಾಧಕ ತಂಗವೇಲು ಮರಿಯಪ್ಪನ್ (1.67ಮೀ) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ವರುಣ್ ಭಟಿಗೆ ಇದು ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿದೆ.

ಗುರ್ಜರ್​ಗೆ ಬೆಳ್ಳಿ: ಜಾವೆಲಿನ್ ಥ್ರೋನ ಎಫ್46 ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜರ್, 61.33 ಮೀ. ದೂರ ಭರ್ಜಿ ಎಸೆದು ಬೆಳ್ಳಿ ಗೆದ್ದುಕೊಂಡರು. ಇದೇ ವಿಭಾಗದಲ್ಲಿ ಪ್ಯಾರಾಲಿಂಪಿಕ್ ಸ್ವರ್ಣ ವಿಜೇತ ದೇವೇಂದ್ರ ಜಜಾರಿಯಾ 4ನೇ ಸ್ಥಾನಕ್ಕೆ ಕುಸಿದರು. ಭಾರತದ ಮತ್ತೋರ್ವ ಸ್ಪರ್ಧಿ ರಿಂಕು ಕಂಚು ಪಡೆದರು. ಮಹಿಳೆಯರ 400 ಮೀಟರ್ ಟಿ45/46/47 ವಿಭಾಗದಲ್ಲಿ ಜಯಂತಿ ಬೆಹೆರಾ ಬೆಳ್ಳಿ ಗೆದ್ದುಕೊಂಡರು. ಉಳಿದಂತೆ ಪುರುಷರ 400 ಮೀಟರ್​ನ ವಿವಿಧ ವಿಭಾಗಗಳಲ್ಲಿ ಅವಿಲ್ ಕುಮಾರ್ (ಟಿ23 ವಿಭಾಗ), ವಿಜಯ್ ಕುಮಾರ್ (ಟಿ44, 62/64 ವಿಭಾಗ), ಸಂದೀಪ್ ಮಾನ್ (ಟಿ45,46/47 ವಿಭಾಗ) ಕಂಚು ಗೆದ್ದುಕೊಂಡರು. ಪುರುಷರ 400 ಮೀಟರ್ ಫ್ರೀಸ್ಟೈಲ್ ಎಸ್-10 ವಿಭಾಗದಲ್ಲಿ ಸ್ಪಪ್ನಿಲ್ ಪಾಟೀಲ್ ಕಂಚು ಪಡೆದರು.

ರಾಜ್ಯದ ರಾಧಾಗೆ ಕಂಚಿನ ಹಾರ

ಚಿತ್ರದುರ್ಗದ ಚಳ್ಳಕೆರೆಯ ರಾಧಾ ವೆಂಕಟೇಶ್ ಮಹಿಳೆಯರ 400 ಮೀಟರ್ ಓಟದಲ್ಲಿ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ಕಂಚು ಗೆದ್ದ ಸಾಧನೆ ಮಾಡಿದರು. ಪ್ರಬಲ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ 1ನಿಮಿಷ 7.03 ಸೆಕೆಂಡ್​ಗಳಲ್ಲಿ ಈ ದೂರ ಕ್ರಮಿಸಿದರು. ಥಾಯ್ಲೆಂಡ್​ನ ತಾನೊವಾಂಗ್ ಸುನೀಪೊರ್ನ್ (1ನಿ.03.38ಸೆ) ಹಾಗೂ ಇರಾನ್​ನ ಸರ್ಫಾರ್​ಜಾದ್ ಹಗರ್ (1ನಿ.06.80ಸೆ) ಕ್ರಮವಾಗಿ ಸ್ವರ್ಣ ಹಾಗೂ ಬೆಳ್ಳಿ ಗೆದ್ದರು. ರಾಧಾಗೆ ಇದು ಕೂಟದಲ್ಲಿ 2ನೇ ಪದಕವಾಗಿದೆ. ಇದಕ್ಕೆ ಮುನ್ನ 1500 ಮೀಟರ್ ಓಟದಲ್ಲಿ ಬೆಳ್ಳಿ ಜಯಿಸಿದ್ದರು.