2002 ರ ಗೋಧ್ರಾ ಹತ್ಯಾಕಾಂಡ: ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

0
420

2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತೊಬ್ಬನಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಹಮದಾಬಾದ್‌ (ಪಿಟಿಐ): 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತೊಬ್ಬನಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 

ಯಾಕುಬ್ ಪಟಾಲಿಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಪ್ರಕರಣ ನಡೆದ ಹದಿನಾರು ವರ್ಷಗಳ ಬಳಿಕ 2018ರಲ್ಲಿ ಈತನನ್ನು ಬಂಧಿಸಲಾಗಿತ್ತು. 

ಪ್ರಕರಣದ ವಿಚಾರಣೆ ನಡೆಸಿದ ಎಸ್‌ಐಟಿ ವಿಶೇಷ ನ್ಯಾಯಾಧೀಶ ಎಚ್.ವಿ.ವೋರಾ ಈ ತೀರ್ಪು ನೀಡಿದ್ದಾರೆ. 

ಸಾಬರಮತಿ ಕೇಂದ್ರೀಯ ಕಾರಾಗೃಹದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ 
ವಿಚಾರಣೆ ನಡೆಸಲಾಗಿತ್ತು.

ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, 2011ರಂದು ಎಸ್‌ಐಟಿ ವಿಶೇಷ ಕೋರ್ಟ್ 31 ಮಂದಿಯನ್ನು ದೋಷಿ ಎಂದು ಘೋಷಿಸಿತ್ತು. 11 ಮಂದಿಗೆ ಗಲ್ಲು ಶಿಕ್ಷೆ, 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಘಟನೆ ಏನು?

2002 ಫೆಬ್ರವರಿ 27ರಂದು ಗುಜರಾತ್​ನ ಗೋಧ್ರಾರೈಲ್ವೆ ಸ್ಟೇಷನ್​ನಲ್ಲಿ ನಿಂತಿದ್ದ ಸಬರಮತಿ ಎಕ್ಸ್​ಪ್ರೆಸ್​ನ ಎಸ್-6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. 59 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೆಚ್ಚಿನವರು ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಾಗಿದ್ದರು. ಈ ಕಾರಣದಿಂದ ಫೆಬ್ರವರಿ 28ರಿಂದ ಮಾ.31ರವರೆಗೆ ಗುಜರಾತ್​ನ ಹಲವು ಭಾಗಗಳಲ್ಲಿ ದಂಗೆ ಉಂಟಾಗಿತ್ತು. ಇದರಲ್ಲಿ 1,200ಕ್ಕೂ ಹೆಚ್ಚು ಜನರು ಮೃತರಾದರು. 1,500 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಹನ್ನೊಂದು ಜನರ ಗಲ್ಲುಶಿಕ್ಷೆ ಜೀವಾವಧಿಗೆ ಬದಲು

2017ರ ಅಕ್ಟೋಬರ್​ನಲ್ಲಿ ಗುಜರಾತ್ ಹೈಕೋರ್ಟ್, ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಗಲ್ಲುಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿಗೆ ಬದಲಾಯಿಸಿತ್ತು. 20 ಜನರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಮುಂದುವರಿಸಿತ್ತು. ಇದಕ್ಕೂ ಮೊದಲು ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, 2011ರ ಮಾ.1ರಂದು 31 ಜನರನ್ನು ಅಪರಾಧಿಗಳೆಂದು ಘೋಷಿಸಿ 63 ಜನರನ್ನು ದೋಷಮುಕ್ತಗೊಳಿಸಿತ್ತು.ಇದರಲ್ಲಿ 11 ಜನರಿಗೆ ಗಲ್ಲುಶಿಕ್ಷೆ ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.