2.9 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ: ಫೇಸ್​ಬುಕ್​

0
463

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ್ದ ಹ್ಯಾಕರ್ಸ್​ಗಳು 2.9 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿದ್ದಾರೆ ಎಂದು ಫೇಸ್​ಬುಕ್​ ತಿಳಿಸಿದೆ.

ಸ್ಯಾನ್​ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ್ದ ಹ್ಯಾಕರ್ಸ್​ಗಳು 2.9 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿದ್ದಾರೆ ಎಂದು ಫೇಸ್​ಬುಕ್​ ತಿಳಿಸಿದೆ.

ಈ ಮೊದಲು ಸೆಪ್ಟೆಂಬರ್​ 29ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಫೇಸ್​ಬುಕ್ ಸೈಬರ್​ ದಾಳಿಯಿಂದ ಸುಮಾರು 5 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಶಂಕೆ ಇದೆ ಎಂದು ತಿಳಿಸಿತ್ತು. ಫೇಸ್​ಬುಕ್​ನ ವೀವ್​ ಅಸ್​ ಫೀಚರ್​ ಬಳಸಿ ಹ್ಯಾಕರ್​ಗಳು ಕನ್ನ ಹಾಕಿದ್ದಾರೆ. ಸದ್ಯ ವೀವ್​ ಅಸ್​ ಫೀಚರ್​ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಫೇಸ್​ಬುಕ್​ ತಿಳಿಸಿತ್ತು.

ಈಗ ಫೇಸ್​ಬುಕ್​ನ ಉಪಾಧ್ಯಕ್ಷ ಗೈ ರೋಸೆನ್ ಮತ್ತೊಂದು ಹೇಳಿಕೆ ಬಿಡುಗಡೆ ಮಾಡಿದ್ದು, 1.5 ಕೋಟಿ ಬಳಕೆದಾರರ ಹೆಸರು, ಫೋನ್​ ನಂಬರ್​, ಇಮೇಲ್​ ವಿಳಾಸದ ಮಾಹಿತಿ ಬಯಲಾಗಿದೆ. 1.4 ಕೋಟಿ ಬಳಕೆದಾರರ ಕುರಿತು ಹೆಚ್ಚಿನ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಹ್ಯಾಕರ್ಸ್​ಗಳು ಫೇಸ್​ಬುಕ್​ ಬಳಕೆದಾರರ ಜನ್ಮ ದಿನಾಂಕ, ಲಿಂಗ, ಧರ್ಮ, ವಾಸಸ್ಥಳ, ಬಳಕೆದಾರರು ಇತ್ತೀಚೆಗೆ ಭೇಟಿ ನೀಡಿದ್ದ ಮಾಹಿತಿ ಸೇರಿದಂತೆ ಇನ್ನಷ್ಟು ಸೂಕ್ಷ್ಮ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ. ಇದುವರೆಗೂ ಹ್ಯಾಕರ್ಸ್​ಗಳು ಯಾರು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ರೋಸೆಸ್​ ಮಾಹಿತಿ ನೀಡಿದ್ದಾರೆ.

ಫೇಸ್​ಬುಕ್​ನ ಇತರ ಸೇವೆಗಳಾದ ಮೆಸೆಂಜರ್​, ಮೆಸೆಂಜರ್​ ಕಿಡ್ಸ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​, ಓಕುಲಸ್​, ವರ್ಕ್​ಪ್ಲೇಸ್​, ಪೇಜಸ್​, ಪೇಮೆಂಟ್ಸ್​, ಥರ್ಡ್​ ಪಾರ್ಟಿ ಆ್ಯಪ್​ಗಳ ಮೇಲೆ ಹ್ಯಾಕರ್ಸ್​ಗಳು ದಾಳಿ ನಡೆಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್​)