18 ಕೀಟ ನಾಶಕಗಳ ಬಳಕೆಗೆ ಕೇಂದ್ರ ಸರ್ಕಾರ ನಿಷೇಧ

0
38

ಕೇಂದ್ರ ಸರಕಾರ ಭತ್ತ, ಗೋಧಿ ಹಾಗೂ ಕ್ಯಾಬೇಜ್‌, ಬದನೆ, ಬೆಂಡೆಕಾಯಿ ಇತ್ಯಾದಿ ತರಕಾರಿಗಳ ಬೆಳೆಗಳಲ್ಲಿ ಬಳಸುವ ಅಪಾಯಕಾರಿ 18 ಕೀಟನಾಶಕಗಳ ಬಳಕೆಯನ್ನು ನಿಷೇಧಿಸಿದೆ.

ಹೊಸದಿಲ್ಲಿ :  ಕೇಂದ್ರ ಸರಕಾರ ಭತ್ತ, ಗೋಧಿ ಹಾಗೂ ಕ್ಯಾಬೇಜ್‌, ಬದನೆ, ಬೆಂಡೆಕಾಯಿ ಇತ್ಯಾದಿ ತರಕಾರಿಗಳ ಬೆಳೆಗಳಲ್ಲಿ ಬಳಸುವ ಅಪಾಯಕಾರಿ 18 ಕೀಟನಾಶಕಗಳ ಬಳಕೆಯನ್ನು ನಿಷೇಧಿಸಿದೆ. ಈ ಪೈಕಿ 12 ಕೀಟನಾಶಕಗಳನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ. ಇನ್ನೂ 6 ಕೀಟನಾಶಕಗಳು 2020ರ ಡಿಸೆಂಬರ್‌ 31ರೊಳಗೆ ನಿಷೇಧಿಸಲಾಗುವುದು ಎಂದು ಸರಕಾರ ತಿಳಿಸಿದೆ. 

ಈ ಹಿಂದೆ 2013ರಲ್ಲಿ ರಚನೆಯಾಗಿದ್ದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿದೆ. ಒಟ್ಟು 66 ಕೀಟನಾಶಕಗಳನ್ನು ಸಮಿತಿ ಅಧ್ಯಯನಕ್ಕೆ ಒಳಪಡಿಸಿತ್ತು. 2 ವರ್ಷಗಳ ನಂತರ ತನ್ನ ವರದಿಯನ್ನೂ ಸರಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ ಒಟ್ಟು 18 ಕೀಟ ನಾಶಕಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಆದರೆ ಈ ಎಲ್ಲ 66 ಕೀಟನಾಶಕಗಳೂ ಒಂದಿಲ್ಲೊಂದು ರಾಷ್ಟ್ರದಲ್ಲಿ ನಿಷೇಧಕ್ಕೀಡಾಗಿವೆ ಅಥವಾ ಬಳಕೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎನ್ನುವುದು ಗಮನಾರ್ಹ. 

ನಿಷೇಧಿತ ಕೀಟನಾಶಕಗಳು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ಸಮಿತಿ ತಿಳಿಸಿತ್ತು. 2020ರ ಡಿಸೆಂಬರ್‌ 31ರಿಂದ ಅಲಾಕ್ಲೋರ್‌, ಡಿಕ್ಲೋರ್‌ವೊಸ್‌, ಫೋರೇಟ್‌, ಫೋಸ್ಪಾಮಿಡೊನ್‌, ಟ್ರಿಯಾಜೊಫೋಸ್‌ ಮತ್ತು ಟ್ರಿಕ್ಲೋರ್‌ಫೋನ್‌ ಎಂಬ ಇತರ 6 ಕೀಟ ನಾಶಕಗಳ ಬಳಕೆ ನಿಷೇಧಕ್ಕೀಡಾಗಲಿದೆ. ನಿಯಮಾವಳಿಗಳ ಪ್ರಕಾರ ಎಲ್ಲ 12 ನಿಷೇಧಿತ ಕೀಟನಾಶಕಗಳ ಬಳಕೆ, ಆಮದು, ಉತ್ಪಾದನೆ, ಸಾಗಣೆ ಮತ್ತು ಮಾರಾಟ ಕಾನೂನುಬಾಹಿರವಾಗಲಿದೆ. ನಿಷೇಧಿತ ಕೀಟನಾಶಕಗಳ ಉತ್ಪಾದನೆ, ಆಮದು , ಮಾರಾಟ ಕುರಿತು ನೋಂದಣಿ ದಾಖಲೆ ಹೊಂದಿರುವವರು, ಮೂರು ತಿಂಗಳಿನ ಒಳಗೆ ಹಿಂತಿರುಗಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರಕಾರ ತಿಳಿಸಿದೆ. ಉಳಿದ 6 ಕೀಟನಾಶಕಗಳ ಆಮದು ಕೂಡ 2019ರ ಜನವರಿ 1ರಿಂದ ಮುಕ್ತಾಯವಾಗಲಿದೆ. 

ಈ ಕೀಟನಾಶಕಗಳು ಅಂತರ್ಜಲ ಹಾಗೂ ನೀರಿನ ಮೂಲಗಳಲ್ಲೂ ಪತ್ತೆಯಾಗಿದ್ದು, ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂದು ಸಮಿತಿ ತಿಳಿಸಿದೆ. 

ಇಂಡಿಯನ್‌ ಅಗ್ರಿಕಲ್ಚರಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ವಿಶ್ರಾಂತ ಪ್ರೊಫೆಸರ್‌ ಅನುಪಮ್‌ ವರ್ಮಾ ನೇತೃತ್ವದಲ್ಲಿ ಅಧ್ಯಯನ ನಡೆದಿತ್ತು. ಹೀಗಿದ್ದರೂ ಈ ಕ್ರಮ ಸಾಲದು ಹಾಗೂ ಇನ್ನಷ್ಟು ಕೀಟನಾಶಕಗಳ ಬಳಕೆಯನ್ನು ಸರಕಾರ ನಿಷೇಧಿಸಬೇಕು ಎಂದು ಕೃಷಿ ವಲಯದ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ”ಮೊನೊಕ್ರೊಟೊಫೋಸ್‌ನಂಥ ಅಪಾಯಕಾರಿ ಕೀಟನಾಶಕಗಳು ಪಟ್ಟಿಯಿಂದ ಹೊರಗುಳಿದಿದೆ ಎಂದು ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತೆ ಕವಿತಾ ಕರುಗಂಟಿ ಹೇಳಿದ್ದಾರೆ. ”ವಾಸ್ತವವಾಗಿ ದೇಶದಲ್ಲಿ 105 ಕೀಟನಾಶಕಗಳು ನಿಷೇಧಕ್ಕೆ ಯೋಗ್ಯವಾಗಿವೆ. ಆದರೆ ಸಮಿತಿಯು ಕೇವಲ 66 ಕೀಟನಾಶಕಗಳ ಪಟ್ಟಿಯನ್ನು ಕೊಟ್ಟಿದೆ” ಎಂದು ಹೇಳಿದ್ದಾರೆ.