160 ಕೋಟಿ ವಾವತಿಸಿ; ಇಲ್ಲವಾದ್ದಲ್ಲಿ 2023 ವಿಶ್ವಕಪ್ ಆತಿಥ್ಯ ನಷ್ಟ: ಬಿಸಿಸಿಐಗೆ ಐಸಿಸಿ ಎಚ್ಚರಿಕೆ

0
804

ಭಾರತಕ್ಕೆ 2023ರ ಏಕದಿನ ವಿಶ್ವಕಪ್ ಆತಿಥ್ಯ ನಷ್ಟವಾಗುವ ಭೀತಿ ಎದುರಾಗಿದೆ. ತಾಜಾ ಬೆಳವಣಿಗೆಯಲ್ಲಿ 160 ಕೋಟಿ ರೂಪಾಯಿ ಪಾವತಿಸುವಂತೆ ಬಿಸಿಸಿಐಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ.

ಮುಂಬಯಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಚಾಟಿ ಬೀಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಡಿಸೆಂಬರ್ 31ರ ಒಳಗೆ 23 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 160 ಕೋಟಿ ರೂ.) ಪಾವತಿಸುವಂತೆ ಸೂಚಿಸಿದೆ.

ಒಂದು ವೇಳೆ ಈ ಅವಧಿಯೊಳಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಲು ವಿಫಲವಾದರೆ ಭಾರತದಲ್ಲಿ ನಿಗದಿಯಾಗಿರುವ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಏಕದಿನ ವಿಶ್ವಕಪ್ ಆತಿಥ್ಯ ಹಕ್ಕು ನಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದೆ. 

2016ರಲ್ಲಿ ಭಾರತದಲ್ಲಿ ಆಯೋಜನೆಯಾದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತೆರಿಗೆ ಕಡಿತಕ್ಕೆ ಸಂಬಂಧಿಸಿದಂತೆ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸುವಂತೆ ಐಸಿಸಿ ಬೇಡಿಕೆ ಮುಂದಿರಿಸಿದೆ. 

ಜಾಗತಿಕ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ಭಾರತದವರೇ ಆದ ಮಾಜಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಚುಕ್ಕಾಣಿ ಹಿಡಿದಿದ್ದಾರೆ. ಅತ್ತ ಸುಪ್ರೀಂ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿ ಮೇಲ್ನೋಟದಲ್ಲಿ ಬಿಸಿಸಿಐ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು 10 ದಿನದೊಳಗೆ ಐಸಿಸಿಗೆ ನಷ್ಟ ಪರಿಹಾರ ಒದಗಿಸುವ ಒತ್ತಡಕ್ಕೆ ಬಿಸಿಸಿಐ ಸಿಲುಕಿದೆ. 

ಅದೇ ಹೊತ್ತಿಗೆ ನಿರ್ದಿಷ್ಟ ಮೊತ್ತ ಪಾವತಿಸದಿದ್ದಲ್ಲಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭಾರತದ ಲಾಭದ ಅಂಶವನ್ನು ಕಡಿತಗೊಳಿಸುವುದಾಗಿಯೂ ಐಸಿಸಿ ಎಚ್ಚರಿಕೆ ನೀಡಿದೆ.