15 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಚಾಂ‍ಪಿಯನ್‌ಷಿಪ್‌ :ಭಾರತಕ್ಕೆ ಕಂಚಿನ ಪದಕ

0
140

ಭಾರತದ ಬಾಲಕರ ತಂಡದವರು ನೇ‍ಪಾಳದ ಕಠ್ಮಂಡುವಿನಲ್ಲಿ ನಡೆದ 15 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಚಾಂ‍ಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ನವದೆಹಲಿ: ಭಾರತದ ಬಾಲಕರ ತಂಡದವರು ನೇ‍ಪಾಳದ ಕಠ್ಮಂಡುವಿನಲ್ಲಿ ನಡೆದ 15 ವರ್ಷದೊಳಗಿನವರ ಸ್ಯಾಫ್‌ ಫುಟ್‌ಬಾಲ್‌ ಚಾಂ‍ಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಎಎನ್‌ಎಫ್‌ಎ ಸಂಕೀರ್ಣದಲ್ಲಿ ನವೆಂಬರ್ 3 ರ ಶನಿವಾರ ನಡೆದ ಮೂರನೇ ಸ್ಥಾನದ ‘ಪ್ಲೇ ಆಫ್’ ಹೋರಾಟದಲ್ಲಿ ಭಾರತ 1–0 ಗೋಲಿನಿಂದ ನೇಪಾಳ ತಂಡವನ್ನು ಸೋಲಿಸಿತು. ಭಾರತ ತಂಡದವರು ಆರಂಭ
ದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ತವರಿನ ಅಭಿಮಾನಿಗಳ ಎದುರು ಕಣಕ್ಕಿಳಿದಿದ್ದ ನೇಪಾಳ ಕೂಡಾ ಮಿಂಚಿತು. ಹೀಗಾಗಿ ಮೊದಲ 15 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ನಂತರ ಭಾರತ ಇನ್ನಷ್ಟು ಚುರುಕಾಗಿ ಆಡಿತು. 18ನೇ ನಿಮಿಷದಲ್ಲಿ ತಲಚೆವು ವನ್ಲಾಲ್ರುಟ್‌ಫೆಲಾ ಕಾಲ್ಚಳಕ ತೋರಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಸೊಗಸಾದ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ತಲಚೆವು ಅದನ್ನು ಚಾಕಚಕ್ಯತೆಯಿಂದ ಗುರಿ ಮುಟ್ಟಿಸಿ ಸಂಭ್ರಮಿಸಿದರು.

42ನೇ ನಿಮಿಷದಲ್ಲಿ ಪ್ರವಾಸಿ ಪಡೆಗೆ ಮುನ್ನಡೆ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶ ಸಿಕ್ಕಿತ್ತು. ಭಾರತದ ಆಟಗಾರನ ‍ಪ್ರಯತ್ನವನ್ನು ನೇಪಾಳ ತಂಡದ ಗೋಲ್‌ಕೀಪರ್‌ ವಿಫಲಗೊಳಿಸಿದರು.

ದ್ವಿತೀಯಾರ್ಧದಲ್ಲೂ ಭಾರತ ತಂಡದ ಆಟ ರಂಗೇರಿತು. ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಪ್ರವಾಸಿ ಪಡೆಯ ಆಟಗಾರರು ಆತಿಥೇಯರ ಎಲ್ಲಾ ಪ್ರಯತ್ನಗಳಿಗೆ ಅಡ್ಡಗಾಲಾದರು. 77ನೇ ನಿಮಿಷದಲ್ಲಿ ಭಾರತದ ಆಟಗಾರ ತಲೆತಾಗಿಸಿ ಕಳುಹಿಸಿದ (ಹೆಡರ್‌) ಚೆಂಡು ಎದುರಾಳಿ ತಂಡದ ಗೋಲುಪೆಟ್ಟಿಗೆ ಸನಿಹದಿಂದ ಹಾದು ಅಂಗಳದ ಆಚೆ ಬಿತ್ತು.