11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವ(‘ನೈಸರ್ಗಿಕ ವಿಕೋಪ’ ಈ ಬಾರಿಯ ಥೀಮ್‌)

0
649

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವದ 11ನೇ ಆವೃತ್ತಿಯು 2019ರ ಫೆ.7ರಿಂದ ಫೆ.14ರವರೆಗೆ ನಗರದಲ್ಲಿ ನಡೆಯಲಿದೆ. ಈ ಬಾರಿ ‘ನೈಸರ್ಗಿಕ ವಿಕೋಪ’ವನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡು ಉತ್ಸವನ್ನು ಏರ್ಪಡಿಸಲು ಸಂಘಟನಾ ಸಮಿತಿ ನಿರ್ಧರಿಸಿದೆ.

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವದ 11ನೇ ಆವೃತ್ತಿಯು 2019ರ ಫೆ.7ರಿಂದ ಫೆ.14ರವರೆಗೆ ನಗರದಲ್ಲಿ ನಡೆಯಲಿದೆ. ಈ ಬಾರಿ ‘ನೈಸರ್ಗಿಕ ವಿಕೋಪ’ವನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡು ಉತ್ಸವನ್ನು ಏರ್ಪಡಿಸಲು ಸಂಘಟನಾ ಸಮಿತಿ ನಿರ್ಧರಿಸಿದೆ. 

ಚಲನಚಿತ್ರೋತ್ಸವದ ಪೂರ್ವಸಿದ್ಧತೆ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಂಘಟನಾ ಸಮಿತಿ ಜೊತೆ ಸಮಾಲೋಚನೆ ನಡೆಸಿದರು. ಬಳಿಕ ಈ ಬಾರಿಯ ಉತ್ಸವದ ಲಾಂಛನವನ್ನು ಅವರು ಬಿಡುಗಡೆ ಮಾಡಿದರು.

‘ರಾಜಾಜಿನಗರದ ಒರಾಯನ್ ಮಾಲ್‌ನ ಪಿವಿಆರ್‌ ಸಿನಿಮಾಸ್‌ನ 11 ಪರದೆಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಶ್ವದ ವಿವಿಧ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. 7000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಗುಣಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಆದ್ಯತೆ ನೀಡುತ್ತೇವೆ’ ಎಂದು ಅವರು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ‘ಏಳು ದಿನ ನಡೆಯುವ ಈ ಉತ್ಸವದಲ್ಲಿ ಏಷ್ಯಾದ ಸಿನಿಮಾಗಳು, ಚಿತ್ರ ಭಾರತಿ (ಭಾರತೀಯ ಸಿನಿಮಾಗಳು) ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

‘ವಿಶ್ವ ಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್‌ ಕ್ಲಾಸಿಕ್‌, ಕೆಲ ದೇಶಗಳ ವಿಶೇಷ ಸಿನಿಮಾ, ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತರರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ಏಷ್ಯಾ ಸಿನಿಮಾ ಪ್ರೋತ್ಸಾಹ ಕೂಟದ (ನೆಟ್‌ ಪ್ಯಾಕ್‌) ಪ್ರಶಸ್ತಿ ವಿಭಾಗ, ಹೆಚ್ಚು ಪ್ರಸಿದ್ಧವಲ್ಲದ ಭಾಷೆಗಳ ಸಿನಿಮಾ ಹಾಗೂ ಜೀವನ ಚರಿತ್ರೆ ಆಧರಿಸಿದ ಚಲನಚಿತ್ರಗಳ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ಇರಲಿದೆ. ದೇಶ ವಿದೇಶಗಳ ಸಿನಿಮಾ ನಿರ್ದೇಶಕರು ಹಾಗೂ ತಂತ್ರಜ್ಞರ ಜೊತೆ ಸಂವಾದ, ವಿಚಾರ ಸಂಕಿರಣಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ’ ಎಂದು ತಿಳಿಸಿದರು.

ವೆಚ್ಚ ಕಡಿತ: ‘ಕಳೆದ ವರ್ಷ ಸುಮಾರು 7 ಕೋಟಿ ವೆಚ್ಚವಾಗಿತ್ತು. ಈ ಬಾರಿ ವೆಚ್ಚವನ್ನು ಶೇ 50ರಷ್ಟು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ’ ಎಂದು ಪಾಂಡೆ ತಿಳಿಸಿದರು. 
‘ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳಿಗೆ ತಗಲುವ ವೆಚ್ಚ ಕಡಿಮೆ ಮಾಡುತ್ತೇವೆಯೇ ಹೊರತು ಸಿನಿಮಾ ಪ್ರದರ್ಶನಕ್ಕೆ ತಗಲುವ ವೆಚ್ಚವನ್ನಲ್ಲ. ಹಾಗಾಗಿ ಚಿತ್ರನಚಿತ್ರೋತ್ಸವದ ಗುಣಮಟ್ಟದಲ್ಲಿ ಸಂಬಂಧಿಸಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ ಎನ್‌.ಜೋಯಿಸ್‌ ತಿಳಿಸಿದರು.  
ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಫೆ. 7ರಂದು ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ ಫೆ. 14ರಂದು ಸಮಾರೋಪ ನಡೆಯಲಿದೆ.

ಆನ್‌ಲೈನ್‌ ನೋಂದಣಿ ಕಡ್ಡಾಯ

ಉತ್ಸವದಲ್ಲಿ ಸಿನಿಮಾ ವೀಕ್ಷಿಸಲು ಬಯಸುವವರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಚಿತ್ರೋದ್ಯಮಿಗಳು ಹಾಗೂ ಫಿಲಂ ಸೊಸೈಟಿ ಸದಸ್ಯರಿಗೆ 400 ನೋಂದಣಿ ಶುಲ್ಕ ಹಾಗೂ ಸಾರ್ವಜನಿಕರಿಗೆ  800 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ನೋಂದಣಿ ಇನ್ನೂ ಆರಂಭವಾಗಿಲ್ಲ. ನೋಂದಣಿ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ಸಂಘಟನಾ ಸಮಿತಿ ತಿಳಿಸಿದೆ.