11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಉದ್ಘಾಟನೆಗೆ ಅನಂತನಾಗ್ ಅತಿಥಿ

0
752

11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಸಜ್ಜಾಗಿದೆ. ಈ ಚಲನಚಿತ್ರೋತ್ಸವ ಉದ್ಘಾಟನೆಗೆ ಏಳು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ಅನಂತನಾಗ್‌ ಮತ್ತು ಹಿಂದಿಯ ನಿರ್ದೇಶಕ ರಾಹುಲ್‌ ರವೈಲ್‌ ಗೌರವ ಅತಿಥಿಗಳಾಗಲಿದ್ದಾರೆ.

ಬೆಂಗಳೂರು: 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಸಜ್ಜಾಗಿದೆ.

ಆದರೆ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್‌ ಯಾರಾದರೊಬ್ಬ ಖ್ಯಾತ ನಟಿಯನ್ನು ಕರೆಸುವ ಯತ್ನ ವಿಫಲವಾಗಿದೆ. ಸಂಪರ್ಕಿಸಿದ ಬಾಲಿವುಡ್‌ನ ಬಹುತೇಕ ನಟಿಯರು ಕನಿಷ್ಠ 60ರಿಂದ 80 ಲಕ್ಷ ರೂಪಾಯಿ ಸಂಭಾವನೆಯನ್ನು ಕೇಳಿದ್ದು, ಇವರ ಉಸಾಬರಿಯೇ ಬೇಡ ಎಂದು ಚಿತ್ರೋತ್ಸವದ ಸಂಘಟಕರು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಫೆ.21ರಂದು ಚಿತ್ರೋತ್ಸವ ಉದ್ಘಾಟಿಸಲಿದ್ದು, ಏಳು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ಅನಂತನಾಗ್‌ ಮತ್ತು ಹಿಂದಿಯ ನಿರ್ದೇಶಕ ರಾಹುಲ್‌ ರವೈಲ್‌ ಗೌರವ ಅತಿಥಿಗಳಾಗಲಿದ್ದಾರೆ.

ವಿದೇಶೀ ಜ್ಯೂರಿಗಳು: ಚಿತ್ರೋತ್ಸವದಲ್ಲಿ ಕನ್ನಡ, ಇಂಡಿಯನ್ ಮತ್ತು ಏಷ್ಯನ್‌ ವಿಭಾಗಗಳಲ್ಲಿ ಪ್ರಶಸ್ತಿ ಆಯ್ಕೆಗೆ, ವಿದೇಶಗಳಿಂದ ಐವರು ಜ್ಯೂರಿಗಳು ಆಗಮಿಸಲಿದ್ದಾರೆ.

ನೆದರ್ಲಂಡ್‌, ಇಸ್ರೇಲ್‌, ಟರ್ಕಿ, ಅಜರ್‌ಬೈಜಾನ್‌ ದೇಶಗಳಿಂದ ಜ್ಯೂರಿಗಳು ಆಗಮಿಸುತ್ತಿದ್ದು, ಭಾರತದ ಶೇಖರ್‌ದಾಸ್‌, ಲೆನಿನ್‌ ಅವರೂ ಜ್ಯೂರಿ ತಂಡದಲ್ಲಿದ್ದಾರೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆಯಲ್ಲಿ ಅಜರ್‌ ಬೈಜಾನ್‌ನ  ಜ್ಯೂರಿಯೊಬ್ಬರು ಭಾಗವಹಿಸುತ್ತಿರುವುದು ವಿಶೇಷ.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ಟಿ.ಎಸ್‌.ನಾಗಾಭರಣ ಅವರ ‘ಕಾನೂರಾಯಣ’, ಪಿ.ಶೇಷಾದ್ರಿಯವರ ‘ಮೂಕಜ್ಜಿಯ  ಕನಸುಗಳು’, ಕೆ.ಶಿವರುದ್ರಯ್ಯ ಅವರ ‘ರಾಮನ ಸವಾರಿ’ ಚಿತ್ರಗಳಿವೆ.

ಈ ಮೂವರು ಬಹುತೇಕ ಚಿತ್ರೋತ್ಸವಗಳಲ್ಲಿ ಸ್ಪರ್ಧಾ ಕಣದಲ್ಲಿ ಇರುವವರೇ. ಆದರೆ, ಈ ಸಲ ಕನ್ನಡದ ಇನ್ನಷ್ಟು ಪ್ರತಿಭಾನ್ವಿತ ನಿರ್ದೇಶಕರೂ ಸ್ಪರ್ಧೆ ನೀಡುತ್ತಿದ್ದಾರೆ. ಮನ್ಸೂರೆ (ನಾತಿಚರಾಮಿ), ಡಿ.ಸತ್ಯಪ್ರಕಾಶ್‌ (ಒಂದಲ್ಲ ಎರಡಲ್ಲ), ದಯಾಳ್‌ ಪದ್ಮನಾಭನ್‌ (ಆ ಕರಾಳ ರಾತ್ರಿ), ಚಂಪಾ ಶೆಟ್ಟಿ (ಅಮ್ಮಚ್ಚಿ ಎಂಬ ನೆನಪು), ವಿಶಾಲ್‌ರಾಜ್‌ (ಸಾವಿತ್ರಿಭಾಯಿ ಫುಲೆ) ಇವರಲ್ಲಿ ಪ್ರಮುಖರು. ಇವುಗಳಲ್ಲಿ ‘ಅಮ್ಮಚ್ಚಿ..’ ಮತ್ತು ‘ಆ ಕರಾಳ ರಾತ್ರಿ’ ಚಿತ್ರಭಾರತಿ ವಿಭಾಗದಲ್ಲೂ ಸ್ಪರ್ಧಿಸುತ್ತಿವೆ.

ರಾಷ್ಟ್ರೀಯ ಪ್ರಶಸ್ತಿ ವಿಭಾಗದಲ್ಲಿ ಮೂರು ಬಂಗಾಳಿ, 2 ಹಿಂದಿ ಮತ್ತು ಮಲಯಾಳಂ, ಮರಾಠಿ, ತಮಿಳು, ಅಸ್ಸಾಮಿ, ಉರ್ದು ಭಾಷೆಯ ತಲಾ ಒಂದು ಚಿತ್ರಗಳು ಪೈಪೋಟಿ ನಡೆಸಿವೆ.

ಈಗಾಗಲೆ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿರುವ ಅಬ್ಯಕ್ತೊ, ಋಣಾನುಬಂಧ (ಬಂಗಾಳಿ), ಸುಡಾನಿ ಫ್ರಂ ನೈಜೀರಿಯ (ಮಲಯಾಳಂ) ಮತ್ತು ವಿಡೊ ಆಫ್‌ ಸೈಲೆನ್ಸ್‌ (ಉರ್ದು) ಗಮನ ಸೆಳೆದಿರುವ ಚಿತ್ರಗಳು.

ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿರುವ ಪ್ಯಾಲಸ್ತೀನ್‌ನ ‘ಸ್ಕ್ರೂ ಡ್ರೈವರ್‌‘, ಇಂಡೊನೇಷ್ಯಾದ ‘27 ಸ್ಟೆಪ್ಸ್‌ ಆಫ್‌ ಮೇ‘, ಹಿಂದಿಯ ‘ನಾಮ್‌ದೇವ್‌ ಭಾವು’ ಮತ್ತು ‘ಭೋಂಸ್ಲೆ’ ಸಿನಿಮಾಗಳು ಏಷ್ಯನ್‌ ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಲಿವೆ.

ಮಲಯಾಳಂನ ಶ್ರೇಷ್ಠ ನಿರ್ದೇಶಕ, ಛಾಯಾಗ್ರಾಹಕ, ಶಾಜಿ ಎನ್‌ ಕರುಣ್‌ ಅವರ ಚಿತ್ರಗಳ ಏರ್ಪಡಿಸಿರುವುದು ಈ ಸಲದ ವಿಶೇಷ. 1989ರಲ್ಲಿ ಕಾನ್ಸ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಅವರ ‘ಪಿರವಿ’ ಅಲ್ಲದೆ, ‘ಕುಟ್ಟಿ ಸ್ರಾಂಕ್‌’, ‘ಷಿ’, ‘ಸ್ವಾಹಂ’ ಮತ್ತು ‘ವಾನಪ್ರಸ್ಥಂ’ ಚಿತ್ರಗಳು ಪ್ರದರ್ಶನ ಕಾಣಲಿವೆ. ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ನಟ ಅಂಬರೀಷ್‌ ಅಭಿನಯದ ‘ಅಂತ’, ‘ಏಳು ಸುತ್ತಿನ ಕೋಟೆ’, ‘ಪಡುವಾರಹಳ್ಳಿ ಪಾಂಡವರು’ ಮತ್ತು ‘ರಂಗನಾಯಕಿ’ ಚಿತ್ರಗಳ ಪ್ರದರ್ಶನವಿದೆ.

2018ರ ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಹಲವು ಸಿನಿಮಾಗಳೂ ಈ ಸಲ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.

ಸಮಕಾಲೀನ ಜಾಗತಿಕ ವಿಭಾಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಿದ್ದು ಸಿನಿಪ್ರೇಮಿಗಳಿಗೆ ರಸದೌತಣ ಕಾದಿದೆ. ಬೆಂಗಳೂರು ಚಿತ್ರೋತ್ಸವ ನಡೆಯುತ್ತಿರುವಾಗಲೇ ಹಾಲಿವುಡ್‌ನಲ್ಲಿ ಫೆ.24ರಂದು ಆಸ್ಕರ್‌ ಪ್ರಶಸ್ತಿಗಳೂ ಘೋಷಣೆಯಾಗಲಿವೆ.

‘ಮುಂಬೈ, ಗೋವಾ, ಬರ್ಲಿನ್‌, ಟೊರಾಂಟೊ, ಕಾನ್ಸ್‌ ಮುಂತಾಗಿ  ಎಲ್ಲ ಚಿತ್ರೋತ್ಸವಗಳೂ ಮುಗಿದ ಬಳಿಕ ಬೆಂಗಳೂರು ಚಿತ್ರೋತ್ಸವ ನಡೆಯುತ್ತಿರುವುದರಿಂದ ನಮಗೆ ಹಲವು ವಿಶ್ವಮಟ್ಟದ ಚಿತ್ರಗಳು ಪ್ರದರ್ಶನಕ್ಕೆ ಬಂದಿವೆ’ ಎಂದು ಚಿತ್ರೋತ್ಸವದ ಕ್ರಿಯೇಟಿವ್‌ ಡೈರೆಕ್ಟರ್‌ ವಿದ್ಯಾಶಂಕರ್‌ ಹೇಳುತ್ತಾರೆ.