10 ಕೋಟಿ ಕುಟುಂಬಗಳಿಗೆ ವಿಮೆ ​ಕಲ್ಪಿಸುವ ‘ಆಯುಷ್ಮಾನ್‌ ​ ಭಾರತ’ ಘೋಷಿಸಿದ ಪಿಎಂ

0
21

ಭಾರತವು 72ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದು, ಗಣ್ಯರು ಕೆಂಪುಕೋಟೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ತಮ್ಮ ಭಾಷಣದಲ್ಲಿ ಹತ್ತು ಕೋಟಿ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸುವ ಆಯುಷ್ಮಾನ್‌ ಭಾರತ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.

ಹೊಸದಿಲ್ಲಿ: ಭಾರತವು 72ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದು, ಗಣ್ಯರು ಕೆಂಪುಕೋಟೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. 

ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಪ್ರಧಾನಿ, ದೇಶವು ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ. ಭಾರತವು ಬಲಿಷ್ಠ ರಾಷ್ಟ್ರವಾಗುತ್ತಿದೆ. ಸಾಮಾಜಿಕ ನ್ಯಾಯದಾನ ವೃದ್ಧಿಯಾಗಿದೆ. ಒಬಿಸಿಗಳ ಹಕ್ಕು ರಕ್ಷಣೆಗೆ ಸಂಸತ್ತಿನಲ್ಲಿ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು. ಇದು ರೀಫಾರ್ಮ್‌, ಪರ್ಫಾರ್ಮ್‌, ಟ್ರಾನ್ಸ್‌ಫಾರ್ಮ್ ಸರಕಾರ ಎಂದು ಮೋದಿ ಬಣ್ಣಿಸಿದರು. 

ಹತ್ತು ಕೋಟಿ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸುವ ಆಯುಷ್ಮಾನ್‌ ಭಾರತ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.ಈ ಯೋಜನೆಯಿಂದ 50 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು. ಪಂಡಿತ್‌ ದೀನ್‌ ದಯಾಳ್‌ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೆ.25ರಂದು ಜನ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು. 

ಅತ್ಯಾಚಾರ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯತತ್ಪರವಾಗಿದೆ. ಅತ್ಯಾಚಾರದಂಥ ಹೀನ ಕೃತ್ಯ ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗಲಿದೆ. ಅಪರಾಧಿಗಳ ಎದೆಯಲ್ಲಿ ನಡುಕ ಹುಟ್ಟಬೇಕು. ಅಂಥ ಕಾನೂನು ರೂಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 

ಪ್ರಧಾನಿ ಜಮ್ಮು ಕಾಶ್ಮೀರದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಘೋಷಿಸಿದರು. ಅಟಲ್‌ ಬಿಹಾರಿ ವಾಜಪೇಯಿ ತೋರಿದ ಮಾರ್ಗದಲ್ಲಿ ಕಾಶ್ಮೀರ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಬೇಕು ಎಂದರು. ತ್ರಿಪುರಾ, ಮೇಘಾಲಯ, ಅರುಣಾಚಲಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಎಎಫ್‌ಎಸ್‌ಪಿಎ ವಾಪಸ್‌ ಪಡೆಯಲಾಗಿದೆ ಎಂದು ಮೋದಿ ಹೇಳಿದರು. 

ತಮಿಳು ಕವನ ಸಾಲು ಉಲ್ಲೇಖ
 

ಭಾರತವು ವಿಶ್ವಕ್ಕೆ ಭರವಸೆಯ ಸಂಕೇತವಾಗಿ ಹೊರಹೊಮ್ಮಲಿದೆ. ಭಾರತವು ವಿಶ್ವದರ ಆರನೇ ಬೃಹತ್‌ ಆರ್ಥಿಕತೆಯಾಗಿ ರೂಪುಗೊಂಡಿದೆ ಎಂದು ಪ್ರಧಾನಿ ಅವರು ತಮಿಳು ಕವಿ ಸುಬ್ರಹ್ಮಣ್ಯಂ ಭಾರತಿ ಅವರ ಕವನದ ಸಾಲುಗಳನ್ನು ಕೂಡ ಉಲ್ಲೇಖಿಸಿದರು. 

ಈಶಾನ್ಯಕ್ಕೆ ದೂರವಾಗಿದ್ದ ದೆಹಲಿಯನ್ನು ನಾಲ್ಕು ವರ್ಷಗಳಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿದರು. ಅಲ್ಲಿ ರಸ್ತೆ, ವಿದ್ಯುತ್‌ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲಾಗಿದೆ. ಈ ರಾಜ್ಯಗಳಲ್ಲಿ ಆರ್ಗಾನಿಕ್‌ ಹಬ್‌ಗಳು ಬೆಳೆಯಲಿವೆ. 

ದೇಶದ 125 ಕೋಟಿ ಜನರ ಅಭಿವೃದ್ಧಿಗಾಗಿ ನಾವು 125 ಕನಸು ಕಂಡಿದ್ದೇವೆ. ಬಡ ತಾಯಂದಿರಿಗೆ ಎಲ್‌ಪಿಜಿ ಸಂಪರ್ಕ ನೀಡಿ ಹೊಗೆಯಿಂದ ಮುಕ್ತರನ್ನಾಗಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ದೇಶದ ಹಲವೆಡೆ ಭಾರೀ ಮಳೆಯಿಂದ ಜನರ ಬದುಕು ದುಸ್ತರಗೊಂಡಿದ್ದು, ಅವರ ದು:ಖದಲ್ಲಿ ನಾವು ಭಾಗಿ ಎಂದು ಮೋದಿ ಹೇಳಿದರು.

ಯೋಧರು, ಪೊಲೀಸರು, ಅರೆಸೇನಾಪಡೆಗಳು ದೇಶಕ್ಕಾಗಿ ಸಲ್ಲಿಸುತ್ತಿರುವ ಸೇವೆಗೆ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಯೋಧರನ್ನು ನಾವೆಲ್ಲ ನೆನಪಿಸಿಕೊಳ್ಳಬೇಕಾಗಿದೆ ಎಂದರು. 

2014ರಿಂದ ನೈರ್ಮಲ್ಯ, ವಿದ್ಯುತ್‌ ಸೌಲಭ್ಯ, ಅಡುಗೆ ಅನಿಲ ಸಂಪರ್ಕ, ಆಫ್ಟಿಕಲ್‌ ಫೈಬರ್‌ ಸಂಪರ್ಕದ ಲಭ್ಯತೆ ಎಲ್ಲ ಗ್ರಾಮಗಳಲ್ಲೂ ಹೆಚ್ಚಳಗೊಂಡಿದೆ. 

ಜಿಎಸ್‌ಟಿ ಮೂಲಕ ಏಕರೂಪ ತೆರಿಗೆ ಪದ್ಧತಿ ಅನುಷ್ಠಾನಕ್ಕೆ ನರೆವಾದ ಸಣ್ಣ ವ್ಯಾಪಾರಿಗಳಿಗೆ ಕೃತಜ್ಞತೆ. ಜಿಎಸ್‌ಟಿ ಜಾರಿ ಬಳಿಕ ಏಳು ಕೋಟಿ ಜನ ತೆರೆಇಗೆ ಪಾವತಿಸಿದ್ದಾರೆ. ಕಳೆದ ಅರುವತ್ತು ವರ್ಷಗಳಲ್ಲಿ 60 ಲಕ್ಷ ಮಂದಿಯಷ್ಟೇ ಪಾವತಿಸಿದ್ದರು. 

ಒಂದು ಶ್ರೇಣಿ, ಒಂದು ಪಿಂಚಣಿ ಮೂಲಕ ನಿವೃತ್ತ ಯೋಧರ ಬೇಡಿಕೆಗೆ ಸ್ಪಂದಿಸಿದ್ದೇವೆ. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಗಡಿಯಲ್ಲಿ ಉಗ್ರರ ದಮನ ಮಾಡಲಾಗಿದೆ. 

ವಿಶ್ವದ ಉನ್ನತ ಸಂಸ್ಥೆಗಳು ಭಾರತದ ಬಗ್ಗೆ ಧನಾತ್ಮಕವಾಗಿ ಮಾತನಾಡಲಾರಂಭಿಸಿವೆ. ಮುದ್ರಾ ಯೋಜನೆಯಡಿ 13ಲಕ್ಷ ಜನರಿಗೆ ಸಾಲ ನೀಡಿದ್ದೇವೆ. 

2022 ರ ವೇಳೆಗೆ ಭಾರತ ಅಂತರಿಕ್ಷದಲ್ಲಿ ಅದ್ಭುತ ಸಾಧನೆ ಮಾಡಲಿದೆ. ಕೃಷಿ ಆಧುನೀಕರಣಕ್ಕೆ ನಮ್ಮ ಲಕ್ಷ್ಯ. ನೂರಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. 

ಆರು ಕೋಟಿ ಬೋಗಸ್‌ ಸರಕಾರಿ ಉದ್ಯೋಗಿಗಳನ್ನು ಪತ್ತೆ ಹಚ್ಚಿ 90,000 ಕೋಟಿ ಉಳಿಸಿದ್ದೇವೆ. ಮೂರು ಲಕ್ಷ ನಕಲಿ ಕಂಪೆನಿಗಳಿಗೆ ಬೀಗ ಹಾಕಲಾಗಿದೆ. 

ಆನ್‌ಲೈನ್‌ ಮೂಲಕ ಪ್ರಾಕೃತಿಕ ಸಂಪತ್ತು ಹರಾಜು. ಪಡಿತರವು ನೇರವಾಗಿ ಫಲಾನುಭವಿಗೆ ತಲುಪಿಸಲು ಕ್ರಮ ಕೈಗೊಂಡಿದ್ದೇವೆ. 

ಸುಪ್ರೀಂಕೋರ್ಟ್‌ನಲ್ಲಿ ಮೂವರು ಮಹಿಳಾ ನ್ಯಾಯಾಧೀಶರ ನೇಮಕ. ಕ್ರೀಡೆಯಲ್ಲೂ ಮಿಂಚುತ್ತಿರುವ ಮಹಿಳೆಯರು. ತ್ರಿವಳಿ ತಲಾಖ್‌ ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇವೆ. 

ಎಲ್ಲರಿಗೂ ಮನೆ, ಎಲ್ಲ ಮನೆಗಳಿಗೂ ವಿದ್ಯುತ್, ಎಲ್ಲಡೆ ಶೌಚಾಲಯ, ಕೌಶಲ್ಯ ವೃದ್ಧಿ ಸೌಲಭ್ಯ, ಎಲ್ಲರಿಗೂ ವಿಮಾ ಯೋಜನೆ ಲಭ್ಯವಾಗಬೇಕು.