‘‍ಪಿ.ಯು ಕಾಲೇಜುಗಳಿಗೆ 25 ಸಾವಿರ ಚದರಡಿ ಜಾಗ ಕಡ್ಡಾಯ’

0
17

ಇನ್ನು ಮುಂದೆ ರಾಜ್ಯದ ಪದವಿ ಪೂರ್ವ ಕಾಲೇಜುಗಳು ಕನಿಷ್ಠ 25 ಸಾವಿರ ಚದರ ಅಡಿ ಜಾಗ ಹೊಂದಿರಬೇಕೆನ್ನುವ ನಿಯಮ ಕಡ್ಡಾಯವಾಗಲಿದೆ. ಈ ಸಂಬಂಧ ಸರ್ಕಾರದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ವಜಾಗೊಳಿದೆ.

ಬೆಂಗಳೂರು: ಇನ್ನು ಮುಂದೆ ರಾಜ್ಯದ ಪದವಿ ಪೂರ್ವ ಕಾಲೇಜುಗಳು ಕನಿಷ್ಠ 25 ಸಾವಿರ ಚದರ ಅಡಿ ಜಾಗ ಹೊಂದಿರಬೇಕೆನ್ನುವ ನಿಯಮ ಕಡ್ಡಾಯವಾಗಲಿದೆ. ಈ ಸಂಬಂಧ ಸರ್ಕಾರದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ವಜಾಗೊಳಿದೆ.

‘ಸರ್ಕಾರದ ನಿಯಮವು, ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಸಂವಿಧಾನಕ್ಕೆ ಅನುಗುಣವಾಗಿದೆ. ಇದರಲ್ಲಿ, ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಶಿಕ್ಷಣ ಸಂಸ್ಥೆಗಳ ಯೋಜಿತ ಅಭಿವೃದ್ಧಿಗೆ ನಿಯಮ ಪಾಲನೆ ಅಗತ್ಯ. ಈ ವಿಷಯದಲ್ಲಿ ಏಕಸದಸ್ಯ ನ್ಯಾಯಪೀಠದ ನಿಲುವು ಸರಿ ಇದೆ. ಆದ್ದರಿಂದ ಇದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಹೇಳಿದೆ.

‘ಕರ್ನಾಟಕ ಪದವಿಪೂರ್ವ ಶಿಕ್ಷಣ (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನ) ನಿಯಮ–2006ರ ಅಡಿಯಲ್ಲಿ ಕಾಲೇಜುಗಳು ಕನಿಷ್ಠ 25 ಸಾವಿರ ಚದರ ಅಡಿ ಜಾಗ ಹೊಂದಿರಬೇಕು ಮತ್ತು ಆ ಜಾಗದಲ್ಲಿ ಕಾಲೇಜಿನ ಕಟ್ಟಡ, ಅದರಲ್ಲಿ ಪ್ರಾಂಶುಪಾಲರ ಕೋಣೆ, ತರಗತಿಗಳು, ಗ್ರಂಥಾಲಯ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯಗಳಿರಬೇಕು ಎಂಬ ಸರ್ಕಾರದ ಆದೇಶ ಸರಿಯಾಗಿದೆ’ ಎಂದು ನ್ಯಾಯಪೀಠ ಹೇಳಿದೆ.