ಹ್ಯಾಮಿಲ್ಟನ್‌ಗೆ 5ನೇ ವಿಶ್ವ ಕಿರೀಟ

0
610

ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌, ಅಕ್ಟೋಬರ್ 28 ರ ಭಾನುವಾರ ಮೋಟರ್‌ಸ್ಪೋರ್ಟ್ಸ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಮೆಕ್ಸಿಕೊ ಸಿಟಿ (ಎಎಫ್‌ಪಿ): ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌, ಅಕ್ಟೋಬರ್ 28 ರ ಭಾನುವಾರ ಮೋಟರ್‌ಸ್ಪೋರ್ಟ್ಸ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಮರ್ಸಿಡೀಸ್‌ ತಂಡದ ಚಾಲಕ ಹ್ಯಾಮಿಲ್ಟನ್‌, ಫಾರ್ಮುಲಾ–1 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಅರ್ಜೆಂಟೀನಾದ ವುವಾನ್‌ ಮ್ಯಾನುಯೆಲ್‌ ಫಂಗಿಯೊ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೆಕ್ಸಿಕೊ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಲೂಯಿಸ್‌ ಈ ಸಾಧನೆ ಮಾಡಿದ್ದಾರೆ. ಒಟ್ಟು 358 ‍‍ಪಾಯಿಂಟ್ಸ್‌ ಕಲೆಹಾಕಿರುವ ಅವರು ಜರ್ಮನಿಯ ಚಾಲಕ ಸೆಬಾ‌ಸ್ಟಿಯನ್‌ ವೆಟಲ್‌ ಅವರನ್ನು ಹಿಂದಿಕ್ಕಿದ್ದಾರೆ.

ಹ್ಯಾಮಿಲ್ಟನ್‌ ಅವರು 2008ರಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಆಗಿದ್ದರು. 2014, 2015 ಮತ್ತು 2017ರಲ್ಲೂ ಪ್ರಶಸ್ತಿ ಜಯಿಸಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದಿರುವ ದಾಖಲೆ ಜರ್ಮನಿಯ ಮೈಕಲ್ ಶುಮಾಕರ್‌ ಹೆಸರಿನಲ್ಲಿದೆ. ಅವರು ಏಳು ಬಾರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಈ ಬಾರಿಯ ವಿಶ್ವ ಚಾಂಪಿಯನ್‌ ಕಿರೀಟಕ್ಕೆ 33 ವರ್ಷದ ಹ್ಯಾಮಿಲ್ಟನ್‌ ಮತ್ತು ಫೆರಾರಿ ತಂಡದ ಚಾಲಕ ವೆಟಲ್‌   ನಡುವೆ ಜಿದ್ದಾಜಿದ್ದಿನ ಪೈ‍ಪೋಟಿ ಏರ್ಪಟ್ಟಿತ್ತು. ಚಾಂಪಿಯನ್‌ ಪಟ್ಟದ ಆಸೆ ಜೀವಂತವಾಗಿಟ್ಟುಕೊಳ್ಳಲು ವೆಟಲ್‌, ಮೆಕ್ಸಿಕೊ ಗ್ರ್ಯಾನ್‌ ‍ಪ್ರೀ ರೇಸ್‌ನಲ್ಲಿ ಪ್ರಶಸ್ತಿ ಗೆಲ್ಲಲೇಬೇಕಿತ್ತು. ಎರಡನೇ ಸ್ಥಾನ ಗಳಿಸಿದ್ದರಿಂದ ಅವರ ಕನಸು ಕಮರಿತು.

‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಪ್ರಶಸ್ತಿ ಗೆಲ್ಲುತ್ತೇನೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಜೊತೆಗೆ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹ್ಯಾಮಿಲ್ಟನ್‌ ನುಡಿದಿದ್ದಾರೆ.

ವರ್ಸ್ಟಾಪನ್‌ ಚಾಂಪಿಯನ್‌: ಮೆಕ್ಸಿಕೊ ಗ್ರ್ಯಾನ್‌ ಪ್ರೀ ರೇಸ್‌ನಲ್ಲಿ ರೆಡ್‌ಬುಲ್‌ ತಂಡದ ಮ್ಯಾಕ್ಸ್‌ ವರ್ಸ್ಟಾಪನ್‌ ಚಾಂಪಿ ಯನ್‌ ಆದರು.

ನೆದರ್ಲೆಂಡ್ಸ್‌ನ ಚಾಲಕ ಮ್ಯಾಕ್ಸ್‌ 1 ಗಂಟೆ 38 ನಿಮಿಷ 28.851 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಫೆರಾರಿ ತಂಡದ ವೆಟಲ್‌ ಎರಡನೇಯವರಾಗಿ ಗುರಿ ಮುಟ್ಟಿದರು. ಫೆರಾರಿ ತಂಡದ ಮತ್ತೊಬ್ಬ ಚಾಲಕ, ಫಿನ್ಲೆಂಡ್‌ನ ಕಿಮಿ ರಾಯಿಕ್ಕೊನೆನ್‌ ಮೂರನೇ ಸ್ಥಾನ ಗಳಿಸಿದರು.

ಫೋರ್ಸ್‌ ಇಂಡಿಯಾ ತಂಡದ ಚಾಲಕ ಫ್ರಾನ್ಸ್‌ನ ಎಸ್ಟೆನ್‌ಬನ್‌ ಒಕಾನ್‌ ಅವರು 11ನೇ ಯವರಾಗಿ ಗುರಿ ಕ್ರಮಿಸಿದರು.