ಹೊಸ ಶಿಕ್ಷಣ ನೀತಿ: 8ನೇ ತರಗತಿವರೆಗೆ ಹಿಂದಿ ಕಡ್ಡಾಯಕ್ಕೆ ಕಸ್ತೂರಿರಂಗನ್ ಸಮಿತಿ ಶಿಫಾರಸು

0
918

ದೇಶಾದ್ಯಂತ 8 ನೇ ತರಗತಿವರೆಗೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಮೂರು-ಭಾಷೆಯ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆ. ಕಸ್ತೂರಿ ರಂಗನ್ ನೇತೃತ್ವದ 9 ಜನ ಸದಸ್ಯರಿರುವ ಹೊಸ ಶಿಕ್ಷಣ ನೀತಿ(ಎನ್ಇಪಿ) ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ದಕ್ಷಿಣ ಭಾರತದ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಈ ಪ್ರಸ್ತಾವನೆ ವಿವಾದಕ್ಕೆ ಎಡೆಮಾಡಿಕೊಡಲಿದೆ.

ನವದೆಹಲಿ: ದೇಶಾದ್ಯಂತ 8 ನೇ ತರಗತಿವರೆಗೂ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಮೂರು-ಭಾಷೆಯ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೆ. ಕಸ್ತೂರಿ ರಂಗನ್ ನೇತೃತ್ವದ 9 ಜನ ಸದಸ್ಯರಿರುವ ಹೊಸ ಶಿಕ್ಷಣ ನೀತಿ(ಎನ್ಇಪಿ) ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ದಕ್ಷಿಣ ಭಾರತದ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಈ ಪ್ರಸ್ತಾವನೆ ವಿವಾದಕ್ಕೆ ಎಡೆಮಾಡಿಕೊಡಲಿದೆ.

2018 ರ ಡಿ. 31 ರಂದು ಅವಧಿ ಕೊನೆಗೊಳ್ಳುವ ಮುಂಚೆ ಸಮಿತಿಯು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿತ್ತು. ವರದಿಯನ್ನು ಔಪಚಾರಿಕವಾಗಿ ಹಸ್ತಾಂತರಿಸಲು ಮಾನವ ಸಂಪನ್ಮೂಲ ಸಚಿವರೊಂದಿಗೆ ಸಭೆ ನಡೆಸಲು ಕೋರಿದ್ದೇವೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇನ್ನು ಈ ಕುರಿತು ಮಾನವ ಸಂಪನ್ಮೂಲ ಇಲಾಖೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಮಾತನಾಡಿ, ಸಮಿತಿಯ ವರದಿಯು ಸಿದ್ಧವಾಗಿದ್ದು, ನನ್ನನ್ನು ಭೇಟಿಯಾಗಲು ಅವಕಾಶ ಕೇಳಿದ್ದಾರೆ. ಸಂಸತ್ತಿನ ಅಧಿವೇಶನದ ನಂತರ ವರದಿಯನ್ನು ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಸಮಿತಿಯ ವರದಿ ಬಗ್ಗೆ ಏನು ಮಾಡಬೇಕು? ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯವನ್ನು ಪಡೆಯಬೇಕಾ ಎಂಬುದನ್ನು ಸರ್ಕಾರವು ಇನ್ನೂ ನಿರ್ಧರಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಹಿಂದಿಯೇತರ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಹಿಂದಿ ಕಡ್ಡಾಯ ಭಾಷೆಯಾಗಿಲ್ಲ. ಒಂದು ವೇಳೆ ಹಿಂದಿಯನ್ನು ಕಡ್ಡಾಯ ಭಾಷೆಯನ್ನಾಗಿ ಮಾಡಿದರೆ ಈ ಎಲ್ಲ ರಾಜ್ಯಗಳ ಶಾಲೆಗಳಲ್ಲೂ ಕಡ್ಡಾಯವಾಗಿ ಹಿಂದಿ ಹೇರಿಕೆಯಾದಂತಾಗುತ್ತದೆ.

ಇತರೆ ಪ್ರಮುಖ ಶಿಫಾರಸುಗಳು

ಹೊಸ ಶಿಕ್ಷಣ ನೀತಿ(NEP) ಕುರಿತಾಗಿ ತಯಾರಿಸಿರುವ ಕರಡು ವರದಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಪಠ್ಯವನ್ನು ದೇಶಾದ್ಯಂತ ಏಕರೂಪಗೊಳಿಸುವುದು, ಬುಡಕಟ್ಟು ಉಪಭಾಷೆಗಳಿಗೆ ದೇವನಾಗರಿಯಲ್ಲಿ ಒಂದು ಲಿಪಿಯನ್ನು ಅಭಿವೃದ್ಧಿಪಡಿಸುವುದು ಮತ್ತು ಕೌಶಲಾಧಾರಿತ ಶಿಕ್ಷಣ ಕ್ರಮವನ್ನು ಉತ್ತೇಜಿಸುವುದು ಸೇರಿ ಹಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದ್ದು, ಶಾಲೆಗಳಲ್ಲಿ “ಭಾರತ-ಕೇಂದ್ರಿತ” ಮತ್ತು “ವೈಜ್ಞಾನಿಕ” ಕಲಿಕಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವಂತೆ ಸೂಚಿಸಲಾಗಿದೆ. (ಏಜೆನ್ಸೀಸ್)