ಹೊಸ ಬ್ರೆಕ್ಸಿಟ್‌ ಒಪ್ಪಂದಕ್ಕೆ ಒಪ್ಪಿಗೆ (ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಘೋಷಣೆ)

0
6

ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಪ್ರಕ್ರಿಯೆಯ (ಬ್ರೆಕ್ಸಿಟ್‌) ಹೊಸ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಅಕ್ಟೋಬರ್ 17 ರ ಗುರುವಾರ ಘೋಷಿಸಿವೆ.

ಲಂಡನ್(ಪಿಟಿಐ): ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ಪ್ರಕ್ರಿಯೆಯ (ಬ್ರೆಕ್ಸಿಟ್‌) ಹೊಸ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಅಕ್ಟೋಬರ್ 17 ರ ಗುರುವಾರ ಘೋಷಿಸಿವೆ. ಈ ಹೊಸ ಒಪ್ಪಂದವನ್ನು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶ್ಲಾಘಿಸಿದ್ದಾರೆ.

‘ಇದು ನ್ಯಾಯೋಚಿತ ಮತ್ತು ಸಮತೋಲನದಿಂದ ಕೂಡಿದ ಒಪ್ಪಂದ’ ಎಂದು  ಐರೋಪ್ಯ ಒಕ್ಕೂಟದ ಮುಖ್ಯಸ್ಥ ಜೀನ್‌ ಕ್ಲೌಡ್‌ ಜಂಕರ್‌ ಬಣ್ಣಿಸಿದ್ದಾರೆ. ಈ ವಾರ ಬ್ರುಸೆಲ್ಸ್‌ನಲ್ಲಿ ಹಮ್ಮಿಕೊಂಡಿರುವ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಇದಕ್ಕೆ ಅನುಮೋದನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

‘ಒಪ್ಪಂದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆದರೆ ಇದಕ್ಕೆ ಬ್ರಿಟನ್‌ ಸಂಸತ್‌ನಲ್ಲಿ ಅನುಮೋದನೆ ಸಿಗಬೇಕಿದೆ’ ಎಂದು ಹೇಳಿದ್ದಾರೆ. ಒಪ್ಪಂದಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಉತ್ತರ ಐರ್ಲೆಂಡ್‌ನ ಡೆಮಾಕ್ರಟಿಕ್‌ ಯೂನಿಯನಿಸ್ಟ್‌ ಪಾರ್ಟಿ (ಡಿಯುಪಿ) ತಿಳಿಸಿದೆ. ಒಕ್ಕೂಟದಿಂದ ಬ್ರಿಟನ್‌ ಹೊರ ಬರಲು ಅಕ್ಟೋಬರ್.31ರ ಗಡುವು ನೀಡಲಾಗಿದೆ.

‘ಹೊಸ ಒಪ್ಪಂದದ ಮೂಲಕ ನಾವು ಮತ್ತೆ ನಿಯಂತ್ರಣ ಸಾಧಿಸಿದ್ದೇವೆ’ ಎಂದು ಬೋರಿಸ್‌ ಜಾನ್ಸನ್‌ ಬ್ರುಸೆಲ್ಸ್‌ಗೆ ತೆರಳುವ ಮುನ್ನ ಟ್ವೀಟ್‌ ಮಾಡಿದ್ದಾರೆ.