ಹೊಸ ಬಡ್ಡಿದರ : ಗೃಹ ಸಾಲ ಅಗ್ಗ

0
18

2016ರ ಏಪ್ರಿಲ್‌ ಮುಂಚೆ ಪಡೆದಿರುವ ಗೃಹ ಸಾಲಗಳು ಇನ್ನು ಮುಂದೆ ಅಗ್ಗವಾಗಲಿವೆ.

ನವದೆಹಲಿ: 2016 ರ ಏಪ್ರಿಲ್‌ ಮುಂಚೆ ಪಡೆದಿರುವ ಗೃಹ ಸಾಲಗಳು ಇನ್ನು ಮುಂದೆ ಅಗ್ಗವಾಗಲಿವೆ.

ಈ ಸಾಲಗಳಿಗೆ ವಿಧಿಸುವ ಬಡ್ಡಿ ದರ ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್‌ಗಳು ಏಪ್ರಿಲ್‌ 1ರಿಂದ ಹೊಸ ವಿಧಾನ ಅಳವಡಿಸಿಕೊಳ್ಳಲಿವೆ. ಹೊಸ ವ್ಯವಸ್ಥೆಯಡಿ, ಬದಲಾಗುವ ಬಡ್ಡಿ ದರದ ಸಾಲಗಳನ್ನು, ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರಕ್ಕೆ (ಎಂಸಿಎಲ್ಆರ್‌) ಜೋಡಿಸಲಾಗುತ್ತಿದೆ. ಬ್ಯಾಂಕ್‌ಗಳು ಈ ಮೊದಲು ಅನುಸರಿಸುತ್ತಿದ್ದ ಮೂಲ ದರಕ್ಕೆ ಹೋಲಿಸಿದರೆ ಈ ಹೊಸ ದರಗಳು ಶೇ 0.50ರಷ್ಟರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಗೃಹ ಸಾಲಗಳ ಕಂತಿನ ಪ್ರಮಾಣವೂ ಇಳಿಕೆಯಾಗಲಿದೆ.

ಮಾರುಕಟ್ಟೆ ದರಗಳಿಗೆ ತಕ್ಕಂತೆ ಗೃಹ ಸಾಲಗಳನ್ನು ಪರಿಷ್ಕರಿಸದ ಬ್ಯಾಂಕ್‌ಗಳು ಈಗ ಹೊಸ ಬಡ್ಡಿ ದರ ಅನ್ವಯಿಸಬೇಕಾಗಿದೆ. ಆರ್‌ಬಿಐ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದಾಗಲೆಲ್ಲ ಬ್ಯಾಂಕ್‌ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣಕ್ಕೆ ಕೇಂದ್ರೀಯ ಬ್ಯಾಂಕ್‌ 2016 ರ ಏಪ್ರಿಲ್‌1ರಿಂದ ‘ಎಂಸಿಎಲ್‌ಆರ್‌’ ವ್ಯವಸ್ಥೆ ಜಾರಿಗೆ ತಂದಿತ್ತು. ಮೂಲ ದರ ಆಧರಿಸಿ ಮಂಜೂರು ಮಾಡಿದ ಸಾಲಗಳು ‘ಎಂಸಿಎಲ್‌ಆರ್‌‘ ವ್ಯವಸ್ಥೆಗೆ ಬದಲಾಗಬೇಕಿತ್ತು. ಆದರೆ, ಬ್ಯಾಂಕ್‌ಗಳು ಇದನ್ನು ಪಾಲಿಸಿರಲಿಲ್ಲ.

2016ರ ಏಪ್ರಿಲ್‌ ನಂತರದ ಗೃಹ ಸಾಲಗಳಿಗೆ ಮಾತ್ರ ‘ಎಂಸಿಎಲ್ಆರ್‌’ ಪ್ರಯೋಜನ ದೊರೆಯುತ್ತಿದೆ. ಬ್ಯಾಂಕ್‌ಗಳು ಅದಕ್ಕೂ ಮುಂಚಿನ ಗೃಹ ಸಾಲಗಳಿಗೆ ಏಕಪಕ್ಷೀಯವಾಗಿ ಮೂಲ ದರ ಆಧರಿಸಿಯೇ ಬಡ್ಡಿ ವಸೂಲಿ ಮಾಡುತ್ತಿದ್ದವು.  ಇನ್ನು ಮುಂದೆ ಹಾಗೆ ಮಾಡುವಂತಿಲ್ಲ.

ವೈಯಕ್ತಿಕ ಸಾಲ, ಕಾರ್‌ ಖರೀದಿ ಸಾಲಗಳು ಸ್ಥಿರ ಬಡ್ಡಿ ದರ ಆಧರಿಸಿರುವುದರಿಂದ ಅವುಗಳಿಗೆ ಈ ಸೌಲಭ್ಯ ಅನ್ವಯಗೊಳ್ಳುವುದಿಲ್ಲ.