ಹೊಸ ಆಧಾರವರ್ಷ ಆಧರಿಸಿ ಹೊಸ ಲೆಕ್ಕ(ಯುಪಿಎ ವೃದ್ಧಿ ದರಕ್ಕೆ ಕತ್ತರಿ)

0
196

ಕಾಂಗ್ರೆಸ್‌ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ವೃದ್ಧಿ ದರವನ್ನು ಕೇಂದ್ರ ಸರ್ಕಾರವು ತಗ್ಗಿಸಿದೆ. 2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಕಾರಣಕ್ಕೆ ಈ ‘ಪರಿಷ್ಕೃತ ವೃದ್ಧಿ ದರ’
ಗಳನ್ನು ಪ್ರಕಟಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನವದೆಹಲಿ (ಪಿಟಿಐ):  ಕಾಂಗ್ರೆಸ್‌ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ವೃದ್ಧಿ ದರವನ್ನು ಕೇಂದ್ರ ಸರ್ಕಾರವು ತಗ್ಗಿಸಿದೆ.

2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಕಾರಣಕ್ಕೆ ಈ ‘ಪರಿಷ್ಕೃತ ವೃದ್ಧಿ ದರ’
ಗಳನ್ನು ಪ್ರಕಟಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2010–11ನೇ ಹಣಕಾಸು ವರ್ಷದಲ್ಲಿ ದೇಶದಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯ ದರ ಶೇ 10.3ರಷ್ಟು ದಾಖಲಾಗಿತ್ತು. ಈ ಆರ್ಥಿಕ ವೃದ್ಧಿ ದರ ಲೆಕ್ಕ ಹಾಕಲು ಆಧಾರವಾಗಿ ಪರಿಗಣಿಸಿದ್ದ 2004–05ನೆ ವರ್ಷದ ಬದಲಿಗೆ, 2011–12 ವರ್ಷವನ್ನು ಆಧಾರವಾಗಿ ಇಟ್ಟುಕೊಂಡು ವೃದ್ಧಿ ದರವನ್ನು ಹೊಸದಾಗಿ ಲೆಕ್ಕಹಾಕಲಾಗಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಆ ವರ್ಷದ ಜಿಡಿಪಿ ದರ ಶೇ 8.5ರಷ್ಟಿತ್ತು ಎಂದು ಪ್ರಕಟಿಸಿದೆ. ಅದೇ ರೀತಿ 2005–06, 2006–07ರಲ್ಲಿನ ಶೇ 9.3 ವೃದ್ಧಿ ದರವನ್ನೂ ಈಗ ಶೇ 7.9ಕ್ಕೆ ಮತ್ತು ಶೇ 8.1ಕ್ಕೆ ಇಳಿಸಲಾಗಿದೆ. 2007–08ರಲ್ಲಿನ ಶೇ 9.8ರ ದರವನ್ನು ಶೇ 7.7ಕ್ಕೆ ತಗ್ಗಿಸಲಾಗಿದೆ.

ನವೆಂಬರ್ 28 ರ ಬುಧವಾರ ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ  ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್‌ ಶ್ರೀವಾಸ್ತವ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಈ ಮಾಹಿತಿ ನೀಡಿದರು.

‘ಗಣಿಗಾರಿಕೆ, ಕಲ್ಲು ಗಣಿ ಮತ್ತು ದೂರಸಂಪರ್ಕ ಕ್ಷೇತ್ರವೂ ಸೇರಿದಂತೆ ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಅಂಕಿ ಅಂಶಗಳ ಮರು ಹೊಂದಾಣಿಕೆ ಕಾರಣಕ್ಕೆ ಜಿಡಿಪಿ ದರ ತಗ್ಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಯುಪಿಎ ಸರ್ಕಾರದ  ಅವಧಿಯಲ್ಲಿನ ಜಿಡಿಪಿ ಅಂಕಿ ಅಂಶಗಳನ್ನಷ್ಟೇ ಪರಿಷ್ಕರಿಸಿರುವುದು ಕಾಕತಾಳೀಯ ಇದ್ದೀತೆ’ ಎನ್ನುವ ವರದಿಗಾರರ ಪ್ರಶ್ನೆಗೆ, ರಾಜೀವ್‌ ಕುಮಾರ್‌ ಅವರು ಸಮರ್ಪಕ ಉತ್ತರ ನೀಡಲಿಲ್ಲ.

‘ಹಾಗೇನೂ ಇಲ್ಲ. ಇದು ಕಾಕತಾಳೀಯವಲ್ಲ. ಸಿಎಸ್‌ಒ ಅಧಿಕಾರಿಗಳು ಕಠಿಣ ಪರಿಶ್ರಮಪಟ್ಟು ಆರ್ಥಿಕತೆಯ ಬೆಳವಣಿಗೆ ಕುರಿತು ಹೊಸದಾಗಿ ಮೌಲ್ಯಮಾಪನ ಮಾಡಿದ್ದಾರೆ. ತಪ್ಪು ಮಾಹಿತಿ ನೀಡುವ ಅಥವಾ ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಈಗ ಹೊಸದಾಗಿ ಪರಿಷ್ಕರಿಸಿರುವ ಜಿಡಿಪಿ ಕುರಿತ ಅಂಕಿ ಅಂಶಗಳು, ರಾಷ್ಟ್ರೀಯ ಸಾಂಖ್ಯಿಕ ಆಯೋಗವು (ಎನ್‌ಎಸ್‌ಸಿ) ನೇಮಿಸಿದ್ದ ಸಮಿತಿಯು ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಗೆ ವ್ಯತಿರಿಕ್ತವಾಗಿವೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2004–05 ರಿಂದ 2013–14ರವರೆಗಿನ ಅವಧಿಯಲ್ಲಿನ ವೃದ್ಧಿ ದರವು, ಹಾಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಸರಾಸರಿ  ಬೆಳವಣಿಗೆಗಿಂತ ಹೆಚ್ಚಿನ ಮಟ್ಟದಲ್ಲಿ ಇತ್ತು ಎಂದು ಈ ಸಮಿತಿ ಅಭಿಪ್ರಾಯಪಟ್ಟಿತ್ತು.

ಈ ಸಮಿತಿಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿರಲಿಲ್ಲ. ‘ಜಿಡಿಪಿ ಲೆಕ್ಕ ಹಾಕಲು ಸಮಿತಿ ಅನುಸರಿಸಿದ  ವಿಧಾನವು ದೋಷಪೂರಿತವಾಗಿತ್ತು’ ಎಂದು ರಾಜೀವ್‌ ಕುಮಾರ್‌ ಪ್ರತಿಪಾದಿಸಿದ್ದಾರೆ.

ಜಿಡಿಪಿ ವೃದ್ಧಿ ದರ ಶೇ 10.08ರಷ್ಟಿತ್ತು

ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ 2006–07ರ ಜಿಡಿಪಿ ವೃದ್ಧಿ ದರ ಶೇ 10.08ರಷ್ಟಿತ್ತು. ಇದು 1991ರಲ್ಲಿ ಜಾರಿಗೆ ತಂದ ಆರ್ಥಿಕ ಉದಾರೀಕರಣ ನಂತರದ ಗರಿಷ್ಠ ವೃದ್ಧಿ ದರವಾಗಿತ್ತು.

1988–89ರಲ್ಲಿ ರಾಜೀವ್‌ ಗಾಂಧಿ ಅವರ ಅಧಿಕಾರಾವಧಿಯಲ್ಲಿ ವೃದ್ಧಿ ದರ ಶೇ 10.2ರಷ್ಟು ದಾಖಲಾಗಿತ್ತು. ಸ್ವಾತಂತ್ರ್ಯಾನಂತರದ ಗರಿಷ್ಠ ವೃದ್ಧಿ ದರ ಇದಾಗಿದೆ.