‘ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ : ರಾಜ್ಯ ಸಚಿವ ಸಂಪುಟ ತೀರ್ಮಾನ

0
48

‘ಹೈದರಾಬಾದ್ ಕರ್ನಾಟಕ’ವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಲು ಸೆಪ್ಟೆಂಬರ್ 6 ರ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು.

ಬೆಂಗಳೂರು: ‘ಹೈದರಾಬಾದ್ ಕರ್ನಾಟಕ’ವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಬೇಕೆಂಬ ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಮುನ್ನುಡಿಯಾಗಿ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿ ಹೆಸರನ್ನು ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ ಎಂದು ಬದಲಿಸಲು ಸೆಪ್ಟೆಂಬರ್ 6 ರ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಯಿತು.

‘ಹೈದರಾಬಾದ್ ಹೆಸರು ಏಕೆ ಬೇಕು?: ಲ್ಯಾಣ ಕರ್ನಾಟಕ ಎಂದು ಬದಲಿಸಿ’ ಎಂಬ ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಲು ಒಪ್ಪಿದ್ದೇವೆಂದು ಕಾನೂನು ಸಚಿವ ಮಾಧುಸ್ವಾಮಿ ಸಭೆಯ ನಿರ್ಧಾರದ ಬಗ್ಗೆ ವಿವರಣೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೆಸರು ಬದಲಾದ ಬಳಿಕ ಎಲ್ಲೆಲ್ಲಿ ‘ಹೈದರಾಬಾದ್ ಕರ್ನಾಟಕ’ ಎಂದು ನಮೂದಾಗಿದೆಯೋ ಅಲ್ಲೆಲ್ಲ ‘ಕಲ್ಯಾಣ ಕರ್ನಾಟಕ’ ಎಂದು ಬದಲಾವಣೆಯಾಗುವುದು ಸಹಜ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೇಡಂ ಶಾಸಕ ರಾಜ್​ಕುಮಾರ್ ಪಾಟೀಲ್, ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಲು ನಮ್ಮ ಭಾಗದ 41 ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು, ಈ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು ಸಂತೋಷ ತಂದಿದೆ ಎಂದರು.

ಮತ್ತೊಂದೆಡೆ ಹೊಸ ಸರ್ಕಾರ ಬಂದ ಬಳಿಕ ಈ ಪ್ರದೇಶದ ಅಭಿವೃದ್ಧಿಗಾಗಿ ರಚನೆಯಾದ ಮಂಡಳಿಗೆ ಹೊಸ ನೇಮಕ ಆಗಬೇಕಿದ್ದು, ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಸಿಎಂ ವಿವೇಚನೆಗೆ ಬಿಡಲು ಸಂಪುಟ ನಿರ್ಧರಿಸಿತೆಂದು ಸಚಿವರು ವಿವರಿಸಿದರು.

ಕಚೇರಿ ಸ್ಥಳಾಂತರವಿಲ್ಲ: ಮಾನವ ಹಕ್ಕು ಆಯೋಗದ ಒಬ್ಬ ಸದಸ್ಯರ ಕಚೇರಿಯನ್ನು ಧಾರವಾಡಕ್ಕೆ ಸ್ಥಳಾಂತರಿಸುವ ತೀರ್ಮಾನವನ್ನು ಹಿಂಪಡೆಯಲಾಗಿದೆ. ಈಗಾಗಲೇ ಆಯೋಗದ ಸದಸ್ಯರು ಪ್ರವಾಸ ಮಾಡುತ್ತಿದ್ದು, ಒಬ್ಬರನ್ನು ಮಾತ್ರ ಅಲ್ಲಿಗೆ ವರ್ಗಾಯಿಸುವುದು ಸರಿಯಲ್ಲ ಎಂದು ಆಯೋಗದಿಂದ ಅರ್ಜಿ ಬಂದ ಹಿನ್ನೆಲೆಯಲ್ಲಿ ತೀರ್ಮಾನ ಮಾಡಲಾಗಿದೆ. ಹೈಕೋರ್ಟ್ ಶಾಶ್ವತ ಪೀಠ ಸ್ಥಾಪನೆ ರೀತಿ ಅಲ್ಲೊಂದು ಆಯೋಗ ಕಚೇರಿ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡಲು ಸಂಪುಟ ನಿರ್ಧರಿಸಿದೆ.

ಸಣ್ಣ ಸೋಲಾರ್ ಪಾರ್ಕ್​ಗಳ ಅಭಿವೃದ್ಧಿಗೆ ಕ್ರಮ: ಸೋಲಾರ್ ವಿದ್ಯುತ್ ಉತ್ಪಾದನೆಗೆ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ‘ಸೋಲಾರ್ ನೀತಿ 2014-21’ಕ್ಕೆ ಸರ್ಕಾರ ಸಣ್ಣ ಪರಿಷ್ಕರಣೆ ತಂದಿದೆ.

ಈವರೆಗೆ ನೂರು ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಪ್ಲಾಂಟ್​ಗಳನ್ನು ಸೋಲಾರ್ ಪಾರ್ಕ್ ಎಂದು ಕರೆಯಲಾಗುತ್ತಿತ್ತು, ಈ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ ಮಾತ್ರ ಕೇಂದ್ರ ಸರ್ಕಾರದ ಸಬ್ಸಿಡಿ ದೊರೆಯುತ್ತಿತ್ತು. ಈಗಿನ ನಿರ್ಧಾರದಂತೆ 25 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವನ್ನೂ ಸೋಲಾರ್ ಪಾರ್ಕ್ ಎಂದು ಪರಿಗಣಿಸಿ ಸಬ್ಸಿಡಿ ಸಿಗುವಂತೆ ಅವಕಾಶ ಕಲ್ಪಿಸಲಾಗುತ್ತದೆ. 100 ಮೆ.ವ್ಯಾಟ್ ಪಾರ್ಕ್ ಸ್ಥಾಪನೆಗೆ 500 ಎಕರೆ ಜಾಗ ಬೇಕಾಗುತ್ತದೆ, ಹೀಗಾಗಿ ಇಷ್ಟುದೊಡ್ಡ ಘಟಕ ಸ್ಥಾಪನೆ ಕಷ್ಟವಾಗಲಿದೆ. 25 ಮೆಗಾವ್ಯಾಟ್ ಉತ್ಪಾದಿಸುವ ಘಟಕ ಸ್ಥಾಪನೆಗೆ 100 ಎಕರೆ ಜಾಗ ಸಾಕಾಗಲಿದೆ.

ಪೂರ್ವಾನ್ವಯದಂತೆ ವೇತನ

ಆರನೇ ವೇತನ ಆಯೋಗದ ಶಿಫಾರಸಿನಂತೆ ಪೊಲೀಸ್ ಇಲಾಖೆಯಲ್ಲಿನ ಕೆಲವೊಂದು ವೃಂದಗಳ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಕುರಿತ ಆದೇಶಗಳಿಗೆ ಸಂಪುಟದಲ್ಲಿ ಘಟನೋತ್ತರ ಅನುಮತಿ ನೀಡಲಾಗಿದೆ. ಕಾರಾಗೃಹ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ವೇತನ ಪರಿಷ್ಕರಣೆ ಸಂಬಂಧ ಕಡತವನ್ನು ಪ್ರತ್ಯೇಕವಾಗಿ ಮುಂದಿನ ಸಂಪುಟದಲ್ಲಿ ಮಂಡಿಸಲು ಸೂಚಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.