ಹೈದರಾಬಾದ್‌ ಮೆಟ್ರೊ ರೈಲಿಗೆ ಮೋದಿ ಚಾಲನೆ

0
16

ಹೈದರಾಬಾದಿನ ಮೊದಲ ಹಂತದ ಮೆಟ್ರೊ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು. ನಂತರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಜೊತೆ ಈ ರೈಲಿನಲ್ಲಿ ಪ್ರಯಾಣಿಸಿದರು.

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲು ಯೋಜನೆ, ಸರ್ಕಾರ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದು ವಿಶ್ವದಲ್ಲಿಯೇ ಅತಿ ದೊಡ್ಡ ಯೋಜನೆ ಎನಿಸಿದೆ.  ₹ 14,800 ಕೋಟಿ ವೆಚ್ಚದಲ್ಲಿ ಮೂರು ಹಂತದ ಯೋಜನೆ ರೂಪಿಸಲಾಗಿದ್ದು, 72 ಕಿ.ಮೀ ಹಾಗೂ 66 ನಿಲ್ದಾಣಗಳನ್ನು ಹೊಂದಿದೆ.

’ಈ ಪೈಕಿ ಮೊದಲ ಹಂತದಲ್ಲಿ ಮಿಯಾಪುರ್‌ನಿಂದ ನಾಗೋಲ್‌ ನಡುವಿನ 30ಕಿ.ಮೀ ಅಂತರವನ್ನು ಈ ಮೆಟ್ರೊ ಕ್ರಮಿಸಲಿದೆ.ಈ ಎರಡೂ ನಿಲ್ದಾಣಗಳ ನಡುವೆ 24 ನಿಲ್ದಾಣಗಳು ಇವೆ. ಮೂರು ಕೋಚ್‌ಗಳು ಇದ್ದು, ಒಂದೊಂದು ಕೋಚ್‌ನಲ್ಲಿ 330 ಜನರು ಪ್ರಯಾಣಿಸಲು ಅವಕಾಶವಿದೆ‘ ಎಂದು ತೆಲಂಗಾಣದ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್‌ ಹೇಳಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಮೆಟ್ರೊ ಸಂಚರಿಸಲಿದೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದಲೇ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

2012ರ ಜುಲೈನಲ್ಲಿ ಮೆಟ್ರೊ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದೇ ಜುಲೈನಲ್ಲೇ ರೈಲು ಸಂಚಾರ ನಡೆಸಬೇಕಿತ್ತು. ಆದರೆ, ಭೂ ಸ್ವಾಧೀನ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ವಿಳಂಬವಾಗಿದೆ.