ಹೆಲ್ಮೆಟ್ ಧರಿಸದೆ ಭಾರತದಲ್ಲಿ ಪ್ರತಿನಿತ್ಯ 98 ಮಂದಿ ವಾಹನ ಸವಾರರ ದುರ್ಮರಣ

0
530

ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡಿ 2017ರಲ್ಲಿ ಪ್ರತಿನಿತ್ಯ ಕನಿಷ್ಠ 98 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಸೀಟ್‌ ಬೆಲ್ಟ್‌ ಧರಿಸದ ಕಾರಣ ಪ್ರತಿದಿನ 79 ಕಾರಿನಲ್ಲಿ ಪ್ರಯಾಣಿಸುವವರು ಕಳೆದ ವರ್ಷ ಭಾರತದಲ್ಲಿ ಸಾವಿಗೀಡಾಗಿದ್ದಾರೆಂದು ರಸ್ತೆ ಅಪಘಾತದ ವರದಿಯೊಂದು ಮಾಹಿತಿ ನೀಡಿದೆ. ವಾಹನ ಸವಾರರು

ಹೊಸದಿಲ್ಲಿ: ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವುದು ಹಾಗೂ ಸೀಟ್‌ ಬೆಲ್ಟ್ ಧರಿಸದೆ ಕಾರಿನಲ್ಲಿ ಪ್ರಯಾಣಿಸುವುದು ಅಪಾಯಕಾರಿ ಎಂಬ ಜಾಗೃತಿ ಪದೇ ಪದೇ ಮೊಳಗುತ್ತಿದ್ದರೂ ಅದಕ್ಕೆ ವಾಹನ ಸವಾರರು ಕೇರ್ ಮಾಡುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ನೂರಾರು ಮಂದಿ ಸಾವಿಗೀಡಾಗುತ್ತಿರುವ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ. 

ಭಾರತದಲ್ಲಿ ಕಳೆದ ವರ್ಷ( 2017) ಪ್ರತಿನಿತ್ಯ 98 ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ಮೃತಪಟ್ಟಿದ್ದರೆ, ಸೀಟ್‌ ಬೆಲ್ಟ್‌ ಧರಿಸದೆ ಕಾರಿನಲ್ಲಿ ಪ್ರಯಾಣಿಸಿ ಪ್ರತಿನಿತ್ಯ 79 ಮಂದಿ ಸಾವಿಗೀಡಾಗಿದ್ದಾರೆ ಎಂದು ರಸ್ತೆ ಅಪಘಾತದ ವರದಿಯೊಂದು ತಿಳಿಸಿದೆ. ಅಲ್ಲದೆ, ವಾಹನ ಸವಾರಿ ವೇಳೆ ಮೊಬೈಲ್ ಫೋನ್ ಬಳಕೆ ಮಾಡಿ ಪ್ರತಿನಿತ್ಯ 9 ಜನ ಮೃತಪಟ್ಟಿರುವುದು ಸಹ ವರದಿ ಮೂಲಕ ಬೆಳಕಿಗೆ ಬಂದಿದೆ. 

ರಾಜ್ಯ ಪೊಲೀಸರು ಹಾಗೂ ಸಾರಿಗೆ ಇಲಾಖೆಗಳು ನೀಡಿದ ಮಾಹಿತಿಯನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಆದರೆ, 2016ಕ್ಕೆ ಹೋಲಿಸಿಕೊಂಡರೆ ದುರ್ಮರಣಕ್ಕೀಡಾದವರ ಸಂಖ್ಯೆ ಅಲ್ಪ ಕಡಿಮೆಯಾಗಿದೆ. 2016ರಲ್ಲಿ ಅಪಘಾತಗಳಿಗೆ ಸುಮಾರು 1.51 ಲಕ್ಷ ಮಂದಿ ಮೃತಪಟ್ಟಿದ್ದರೆ, 2017ರಲ್ಲಿ ಸಾವಿಗೀಡಾದವರ ಸಂಖ್ಯೆ 1.48 ಲಕ್ಷಕ್ಕೆ ಇಳಿಕೆಯಾಗಿದೆ. 

ಆದರೆ, ಹೆಲ್ಮೆಟ್ ಧರಿಸದೆ ಪ್ರಯಾಣಿಸಿ ಮೃತಪಟ್ಟವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. 2016ರಲ್ಲಿ ಹೆಲ್ಮೆಟ್ ಧರಿಸದೆ 10,135 ಮಂದಿ ಮೃತಪಟ್ಟಿದ್ದರೆ, 2017ರಲ್ಲಿ 36 ಸಾವಿರ ಮಂದಿ ದುರ್ಮರಣಕ್ಕೀಡಾಗಿರುವುದು ವರದಿಯಲ್ಲಿ ದಾಖಲಾಗಿದೆ. ಈ ಪೈಕಿ, ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಕರಣಗಳು ನಡೆದಿದ್ದು, 5211 ಮಂದಿ ಮೃತಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ 4406 ಹಾಗೂ ಮಧ್ಯಪ್ರದೇಶದಲ್ಲಿ 3183 ಜೀವಗಳು ಬಲಿಯಾಗಿವೆ. ಇನ್ನು, ದ್ವಿಚಕ್ರ ಸವಾರರ ಪೈಕಿ ಶೇ. 42ರಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೆ ಬಲಿಯಾಗಿದ್ದಾರೆ. ಗುಜರಾತ್‌ನಲ್ಲಿ ಮಾತ್ರ ದ್ವಿ ಚಕ್ರ ವಾಹನ ಸವಾರರಿಗಿಂತ ಹಿಂಬದಿ ಸವಾರರೇ ಹೆಲ್ಮೆಟ್ ಧರಿಸದೆ ಹೆಚ್ಚು ಮೃತಪಟ್ಟಿರುವ ಘಟನೆಗಳು ನಡೆದಿದೆ.