‘ಹೆಬ್ಬಕಗಳ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಸಂರಕ್ಷಣೆಗೆ 33.85 ಕೋಟಿ ಯೋಜನೆ’

0
20

ಅಳಿವಿನಂಚಿ ನಲ್ಲಿರುವ ಹೆಬ್ಬಕಗಳ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಸಂರಕ್ಷಣೆ ಗಾಗಿ 33.85 ಕೋಟಿಯ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ(ಪಿಟಿಐ): ಅಳಿವಿನಂಚಿ ನಲ್ಲಿರುವ ಹೆಬ್ಬಕಗಳ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌) ಸಂರಕ್ಷಣೆ ಗಾಗಿ 33.85 ಕೋಟಿಯ ಯೋಜ ನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ ಎಂದು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ದೈತ್ಯ ಪಕ್ಷಿಗಳ ಸಾಲಿಗೆ ಸೇರುವ ಈ ಹಕ್ಕಿಗಳ ಸಂಖ್ಯೆ ದೇಶದಲ್ಲಿ ಈಗ ಕೇವಲ 130 ಇದೆ ಎಂದೂ ತಿಳಿಸಿದ್ದಾರೆ.

ಹೆಬ್ಬಕ ಸೇರಿದಂತೆ ಅಳಿವಿನಂಚಿನಲ್ಲಿರುವ 21 ಪ್ರಭೇದದ ಪಕ್ಷಿಗಳ ಸಂರಕ್ಷಣೆಗಾಗಿ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಸರ ಸಚಿವಾಲಯವು ಅನುದಾನ ಒದಗಿಸುತ್ತಿದೆ. ಈ ಯೋಜನೆಯ ಮೂಲಕ ಹೆಬ್ಬಕಗಳ ಆವಾಸಸ್ಥಾನ ಅಭಿವೃದ್ಧಿ ಹಾಗೂ ಸಂತಾನೋತ್ಪತ್ತಿ ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.
 
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ಹೆಬ್ಬಕ ಎಂದು ಕರೆಯುತ್ತಾರೆ.  ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ‘ಎರೆಭೂತ’ ಎಂದು ಕರೆದರೆ, ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ‘ಎರಲಾಡ’ ಎಂದು ಗುರುತಿಸುತ್ತಾರೆ.
ಎಲ್ಲೆಲ್ಲಿವೆ
 
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ಭಾರತ ಮತ್ತು ಪಾಕಿಸ್ತಾನದ ಹುಲ್ಲುಗಾವಲು ಪ್ರದೇಶ, ಮರಭೂಮಿ ಪ್ರದೇಶ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಮಧ್ಯಪ್ರದೇಶ, ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಣಿಬೆನ್ನೂರು, ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ.
 
ಆಹಾರ
 
ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ವಿವಿಧ ಬಗೆಯ ಕಾಳುಗಳು, ಕೀಟಗಳು, ಹುಳುಗಳನ್ನು ತಿನ್ನುತ್ತದೆ.
 
ವರ್ತನೆ ಮತ್ತು ಜೀವನ ಕ್ರಮ 
 
ಇದಕ್ಕೆ ದೃಷ್ಟಿ ಸಾಮರ್ಥ್ಯ ಕಡಿಮೆ. ಹೀಗಾಗಿ ಸದಾ ಕೆಳಹಂತದಲ್ಲಿ ಹಾರುತ್ತದೆ. ಅಕ್ರಮ ಬೇಟೆ ಮತ್ತು ವಾಸಸ್ಥಳಗಳ ನಾಶದಿಂದ ಇವುಗಳ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದ್ದು ಅಳಿವಿನಂಚಿಗೆ ತಲುಪಿವೆ.
 
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಈ ಪಕ್ಷಿಯನ್ನು ಕೊಂದವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.ಇಂತಹ ಪಕ್ಷಿಗಳ ಸಂತತಿ ರಕ್ಷಣೆಗೆ ಕರ್ನಾಟಕ ರಾಜ್ಯದ ರಾಣಿಬೆನ್ನೂರಿನಲ್ಲಿ ಧಾಮ, ಸೊಲ್ಲಾಪುರ ಸಮೀಪದಲ್ಲಿ ನನಾಜ್ ಧಾಮ, ದೇಶದ ಇತರ ಕಡೆಗಳಲ್ಲಿ ಬ್ಲಾಕ್ ಓಕ್ ಸೆಂಚುರಿ, ರೊಲ್ಲಾಪಾಡ್ ಸೆಂಚುರಿ, ನಾಗಪುರ ಸಮೀಪದ ಕರೇರಾ ವಲ್ಡ್ ಲೈಫ್ ಸೆಂಚುರಿ, ಇನ್ನು ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿ ಇಂತಹ ಪಕ್ಷಿಗಳ ಧಾಮವನ್ನು ಹೊಂದಿವೆ. ಇನ್ನು ರಾಜಾಸ್ಥಾನದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂತತಿಯ ರಕ್ಷಣೆಗೆ 4.5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.
 
ಸಂತಾನೋತ್ಪತ್ತಿ
 
ಬಯಲು ಪ್ರದೇಶದಲ್ಲಿ ಒಣ ಎಲೆ ಹುಲ್ಲುಗಡ್ಡಿಗಳನ್ನು ಬಳಸಿಕೊಂಡು ಗೂಡನ್ನು ನಿರ್ಮಿಸುತ್ತದೆ. ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟು, ಸುಮಾರು 25 ದಿನಗಳವರೆಗೆ ಕಾವು ಕೊಡುತ್ತದೆ. ಇದು ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆಗಳನ್ನು ಇಡುತ್ತದೆ. ಮರಿ ಹಕ್ಕಿಗಳು ವಯಸ್ಕ ಹಂತದವರೆಗೆ ಬರುವವರೆಗೆ ತಾಯಿಯ ಪೋಷಣೆಯಲ್ಲಿಯೇ ಬೆಳೆಯುತ್ತವೆ.ಇವು ವಯಸ್ಕ ಹಂತಕ್ಕೆ ತಲುಪಲು 3 ವರ್ಷ ಬೇಕಾಗುತ್ತದೆ.
 
ರಾಷ್ಟ್ರೀಯ ಪಕ್ಷಿ ಆಯ್ಕೆಗೆ ಪ್ರಸ್ತಾವನೆ ಇತ್ತು!
 
ಕೃಷ್ಣಮೃಗಗಳು ಹೆಚ್ಚಾಗಿರುವ ಸ್ಥಳದಲ್ಲಿ ಇಂಡಿಯನ್ ಬಸ್ಟರ್ಡ್ ಸಂತತಿಯ ಪಕ್ಷಿಗಳು ಕಾಣಸಿಗುತ್ತವೆ. ಬಿಟ್ಲ್ಸ್ ಜಾತಿ ಹುಳು, ಗುಂಗಾಡಿ, ಹುಲ್ಲಿನ ಬೀಜಗಳು, ವಿವಿಧ ರೀತಿಯ ತೆನೆಗಳೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಆಹಾರ. ಮೊಗಲ್ ರಾಜ ಬಾಬರನಿಗೆ ಅತ್ಯಂತ ಪ್ರಿಯವಾದದ್ದು ಈ ಪಕ್ಷಿಯ ಮಾಂಸವಾಗಿದೆ ಎಂಬುದು ಇತಿಹಾಸ ಹೇಳುತ್ತದೆ. ಹಿಂದೆ ಈ ಪಕ್ಷಿಯು ಮೋಜಿನ ಬೇಟೆಯಿಂದಾಗಿ ಸಂತತಿ ಅವನತಿಯ ಅಂಚಿನಲ್ಲಿದೆ. ಇನ್ನು ಹೆಸರಾಂತ ಪಕ್ಷಿ ತಜ್ಞ ಸಲೀಂ ಅಲಿ ಅವರು, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ರಾಷ್ಟ್ರೀಯ ಪಕ್ಷಿಯಾಗಿ ಮಾಡಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.