ಹೂಡಿಕೆ: ಮುಂಚೂಣಿಗೆ ಬೆಂಗಳೂರು

0
379

ಭವಿಷ್ಯದಲ್ಲಿ ಆಸ್ತಿಗಳ ಮೇಲೆ ಬಂಡವಾಳ ಹೂಡಿಕೆ ಆಕರ್ಷಿ
ಸುವ ವಿಶ್ವದ ಪ್ರಮುಖ ಐದು ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರಲಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಹೇಳಿದೆ.

ಬೆಂಗಳೂರು: ಭವಿಷ್ಯದಲ್ಲಿ ಆಸ್ತಿಗಳ ಮೇಲೆ ಬಂಡವಾಳ ಹೂಡಿಕೆ ಆಕರ್ಷಿಸುವ ವಿಶ್ವದ ಪ್ರಮುಖ ಐದು ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರಲಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಹೇಳಿದೆ.

ಬೆಂಗಳೂರು, ಹ್ಯಾಂಗ್‌ಝೋಹು, ಸ್ಟಾಕ್‌ಹೋಂ, ಕೇಂಬ್ರಿಜ್‌ ಮತ್ತು ಬಾಸ್ಟನ್‌ ನಗರಗಳು ಮುಂದಿನ ಐದು ವರ್ಷಗಳಲ್ಲಿ ಹೂಡಿಕೆದಾರರನ್ನು ಗಣನೀಯವಾಗಿ ಆಕರ್ಷಿಸಲಿವೆ ಎಂದು ನೈಟ್‌ ಫ್ರ್ಯಾಂಕ್‌, ತನ್ನ ಫ್ಯೂಚರ್‌ ಸಿಟೀಸ್‌ ವರದಿಯಲ್ಲಿ ತಿಳಿಸಿದೆ.

ಸಂಪತ್ತು ಸೃಷ್ಟಿ, ಸಂಪತ್ತಿನ ಮುನ್ನೋಟ ಮತ್ತು ಆರ್ಥಿಕ ಪ್ರಗತಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಭವಿಷ್ಯದ ನಗರಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಅಂಶಗಳು ನಗರಗಳ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಸರ್ವತೋಮುಖ ಬೆಳವಣಿಗೆಯನ್ನು ಸುಧಾರಿಸಲಿವೆ.

ಆಕ್ಸ್‌ಫರ್ಡ್‌ನ ಇಕನಾಮಿಕ್ಸ್‌ ಡೇಟಾ ಹೇಳುವಂತೆ, ಐದು ವರ್ಷಗಳಲ್ಲಿ ಬೆಂಗಳೂರಿನ ಜಿಡಿಪಿ ಶೇ 60ರಷ್ಟು ಬೆಳವಣಿಗೆ ಕಾಣಲಿದೆ. ಫ್ಲಿಪ್‌ಕಾರ್ಟ್‌, ಇನ್ಫೊಸಿಸ್‌ ಮತ್ತು ವಿಪ್ರೊದಂತಹ ದಿಗ್ಗಜ ಕಂಪನಿಗಳ ನೆಲೆಯಾಗಿದೆ. ಮೈಕ್ರೊಸಾಫ್ಟ್‌, ಹಿಟಾಚಿ ಮತ್ತು ಸ್ಯಾಮ್ಸಂಗ್‌ನಂತಹ 400ಕ್ಕೂ ಅಧಿಕ ಬಹುಕೋಟಿ ಕಂಪನಿಗಳು ಇಲ್ಲಿ ನೆಲೆಯೂರಿವೆ.

ಬೆಂಗಳೂರಿನ ಶಿಕ್ಷಣ ಕ್ಷೇತ್ರದಲ್ಲಿಯೂ ಹಣ ಹೂಡಿಕೆ ಹೆಚ್ಚುತ್ತಿದೆ. ಈ ಮೂಲಕ ಜ್ಞಾನ ಆಧಾರಿತ ಆರ್ಥಿಕತೆಯ ಬೆಳವಣಿಗೆಗೆ ನಗರವು ಮಹತ್ವದ ಕೊಡುಗೆ ನೀಡುತ್ತಿದೆ. ಕೃತಕ ಬುದ್ಧಿಮತ್ತೆ, ಆಧುನಿಕ ತಂತ್ರಜ್ಞಾನ ಕಂಪನಿಗಳ ಬೆಳವಣಿಗೆ ಹೆಚ್ಚಾಗುತ್ತಿದೆ. ಈ ಸಂಗತಿಗಳಿಂದಾಗಿ ಭವಿಷ್ಯದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕುಬೇರರ ಸಂಖ್ಯೆಯಲ್ಲಿ ಹೆಚ್ಚಳ

 210 ಕೋಟಿ ಮತ್ತು ಅದಕ್ಕಿಂತ ಹೆಚ್ಚು ವೈಯಕ್ತಿಕ ಸಂಪತ್ತು ಹೊಂದಿದವರ (ಯುಎಚ್‌ಎನ್‌ಡಬ್ಲ್ಯುಐಎಸ್‌) ಪ್ರಮಾಣ ಹೆಚ್ಚಳದಲ್ಲಿ ಭಾರತ ಮುಂಚೂಣಿಯಲ್ಲಿ ಇದೆ. 2013ರಿಂದ 2018ರ ಅವಧಿಯಲ್ಲಿ ಕುಬೇರರ ಸಂಖ್ಯೆ ಹೆಚ್ಚಾಗಿದೆ. 

ಮುಂದಿನ ಐದು ವರ್ಷಗಳಲ್ಲಿಯೂ ಭಾರತಿಯರ ಸಂಪತ್ತಿನಲ್ಲಿ ಶೇ 39ರಷ್ಟು ಬೆಳವಣಿಗೆ ಕಂಡುಬರಲಿದೆ. ಸಂಪತ್ತು ಹೆಚ್ಚಳದಲ್ಲಿ ಫಿಲಿಪ್ಪೀನ್ಸ್‌ (ಶೇ 38) ಮತ್ತು ಚೀನಾ (ಶೇ 36) ನಂತರದ ಸ್ಥಾನದಲ್ಲಿ ಇರಲಿವೆ.

ಅತಿ ಹೆಚ್ಚು ಸಂಪತ್ತು ಹೊಂದಿದವರ ಸಂಖ್ಯೆಯು 2018ರಲ್ಲಿ 1,947ರಷ್ಟಿತ್ತು. ಐದು ವರ್ಷಗಳಲ್ಲಿ 2,697ಕ್ಕೆ ಏರಿಕೆಯಾಗಲಿದೆ. ಅಪಾರ ಪ್ರಮಾಣದ ಸಂಪತ್ತು ಹೊಂದಿರುವವರ ಪ್ರಮಾಣ ಬೆಂಗಳೂರಿನಲ್ಲಿ 
ಶೇ 40ರಷ್ಟು ಬೆಳವಣಿಗೆ ಕಾಣಲಿದೆ ಎಂದು ತಿಳಿಸಲಾಗಿದೆ.

ಮುಂಬೈಗೆ 12ನೇ ಸ್ಥಾನ: ಅತಿ ಹೆಚ್ಚು ಸಂಪತ್ತು ಹೊಂದಿರುವ ವಿಶ್ವದ ಪ್ರಮುಖ ನಗರಗಳ ಸಾಲಿನಲ್ಲಿ ಮುಂಬೈ 18ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಏರಿಕೆಯಾಗಿದೆ. ಲಂಡನ್‌ ನಗರ ಮೊದಲ ಸ್ಥಾನದಲ್ಲಿದೆ.