‘ಹುರುನ್‌ ಇಂಡಿಯಾ ಶ್ರೀಮಂತರ ಪಟ್ಟಿ–2017’ ಬೆಂಗಳೂರಿಗೆ 3ನೇ ಸ್ಥಾನ

0
18

ಈಗ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿದ ಭಾರತದ ನಗರಗಳ ಪಟ್ಟಿಯಲ್ಲಿ ಮುಂಬೈ ಮತ್ತು ನವದೆಹಲಿ ಮೊದಲ ಎರಡು ಸ್ಥಾನಗಳಲ್ಲಿ ಇದ್ದು, ಐ.ಟಿ ರಾಜಧಾನಿ ಖ್ಯಾತಿಯ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ಸೋಮವಾರ ಬಿಡುಗಡೆ ಮಾಡಿರುವ ‘ಹುರುನ್‌ ಇಂಡಿಯಾ ಶ್ರೀಮಂತರ ಪಟ್ಟಿ–2017’ ಪ್ರಕಾರ, ಬೆಂಗಳೂರಿನಲ್ಲಿ ಕನಿಷ್ಠ ₹ 1,000 ಕೋಟಿಗಳಷ್ಟು ಸಂಪತ್ತು ಹೊಂದಿದ 51 ಮಂದಿ ಕುಬೇರರು ಇದ್ದಾರೆ. ಈ ಪಟ್ಟಿಯಲ್ಲಿ 23 ಮಂದಿ ಶ್ರೀಮಂತರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಆಚೆ, ₹ 1,000 ಕೋಟಿಗಿಂತ ಹೆಚ್ಚು ಸಂಪತ್ತು ಹೊಂದಿದ ನಾಲ್ವರು ಇದ್ದಾರೆ. ಇವರನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ರಾಜ್ಯದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿದವರ ಸಂಖ್ಯೆ 55 ಆಗಲಿದೆ. ಮಹಾರಾಷ್ಟ್ರದಲ್ಲಿ ₹ 1,000 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿದವರಲ್ಲಿ 32 ಶ್ರೀಮಂತರು ಮುಂಬೈನ ಹೊರಗಿನವರಾಗಿದ್ದಾರೆ.

ರಾಜ್ಯದ ಕುಬೇರರ ಪಟ್ಟಿಯಲ್ಲಿ ಇರುವವರ ಪೈಕಿ 13 ಮಂದಿ ವಲಸೆ ಬಂದವರಾಗಿದ್ದಾರೆ. ಹೀಗೆ ವಲಸೆ ಹೋಗಿ ತಮ್ಮ ಉದ್ದಿಮೆ ಸಾಮ್ರಾಜ್ಯ ಬೆಳೆಸಿದ ಶ್ರೀಮಂತರ ಸಂಖ್ಯೆ ಮಹಾರಾಷ್ಟ್ರದಲ್ಲಿ 23 ಇದ್ದರೆ, ದೆಹಲಿಯಲ್ಲಿ 22 ಇದೆ.

ದೇಶದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿದ ಸಿರಿವಂತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವ ಮುಕೇಶ್‌ ಅಂಬಾನಿ ಅವರ ಸಂಪತ್ತು ಶೇ 58ರಷ್ಟು ಹೆಚ್ಚಾಗಿ ₹ 2,57,900 ಕೋಟಿಗಳಷ್ಟಾಗಿದೆ.

ದ್ವಿತೀಯ ಸ್ಥಾನದಲ್ಲಿ ಇರುವ ಸನ್‌ ಫಾರ್ಮಾದ ದಿಲೀಪ್‌ ಸಾಂಘ್ವಿ ಅವರ ಸಂಪತ್ತಿನ ಮೌಲ್ಯ ₹ 89 ಸಾವಿರ ಕೋಟಿಗಳಷ್ಟಿದೆ. ನಂತರದ ಸ್ಥಾನದಲ್ಲಿ ಎಲ್‌ ಎನ್‌. ಮಿತ್ತಲ್‌ (₹ 88,200 ಕೋಟಿ), ಶಿವ ನಾಡಾರ್‌ (₹ 85,100 ಕೋಟಿ) ಇದ್ದಾರೆ.

# ಬೆಂಗಳೂರಿನ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ವಿಪ್ರೊದ ಅಜೀಮ್‌ ಪ್ರೇಮ್‌ಜಿ ಅವರು ₹ 79,300 ಕೋಟಿಗಳ ಸಂಪತ್ತಿನ  ಒಡೆಯರಾಗಿ ದೇಶಿ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಇದ್ದಾರೆ.

# ಬೆಂಗಳೂರಿನಲ್ಲಿ ಎಂಬಸ್ಸಿ ಪ್ರಾಪರ್ಟಿ ಡೆವೆಲಪ್‌ಮೆಂಟ್ಸ್‌ನ ಜಿತೇಂದ್ರ ವಿರ್ವಾನಿ ದ್ವಿತೀಯ ಸ್ಥಾನದಲ್ಲಿ (₹ 17,600 ಕೋಟಿ) ಇದ್ದಾರೆ. ನಂತರದ ಸ್ಥಾನಗಳಲ್ಲಿ ಬಯೊಕಾನ್‌ನ ಕಿರಣ್‌ ಮಜುಂದಾರ್‌ ಷಾ (₹ 15,400 ಕೋಟಿ) ಮತ್ತು ಮಣಿಪಾಲ್‌ ಎಜುಕೇಷನ್‌ ಆ್ಯಂಡ್‌ ಮೆಡಿಕಲ್‌ನ ರಂಜನ್‌ ಪೈ (₹ 8,400 ಕೋಟಿ) ಇದ್ದಾರೆ.

ಉದ್ಯಮಶೀಲತೆ: ಉದ್ಯಾನ ನಗರಿಯು ಉದ್ಯಮಶೀಲತೆ ಉತ್ಸಾಹದಲ್ಲಿಯೂ ಮುಂಚೂಣಿಯಲ್ಲಿದೆ.  ಸ್ವಂತ ಬಲದ ಮೇಲೆ ಕುಬೇರರಾದ 40 ವರ್ಷದ ಒಳಗಿನ ಮುಂಚೂಣಿ ಐದು ಜನರ ಪೈಕಿ  ಬೆಂಗಳೂರಿನ ಮೂವರು ಇದ್ದಾರೆ.

ಫ್ಲಿಪ್‌ಕಾರ್ಟ್‌ನ ಬಿನ್ನಿ ಬನ್ಸಲ್‌ ₹ 5,400 ಕೋಟಿ ಸಂಪತ್ತಿನ ಒಡೆಯರಾಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಜೊತೆಗಾರ ಸಚಿನ್‌ ಬನ್ಸಲ್‌ ಮೂರನೇ ಸ್ಥಾನದಲ್ಲಿ ಇದ್ದಾರೆ. ‘ಥಿಂಕ್‌ ಆ್ಯಂಡ್ ಲರ್ನ್‌’ದ ಬಿ. ರವೀಂದ್ರನ್‌ ಅವರು 5ನೆ ಸ್ಥಾನದಲ್ಲಿ ಇದ್ದಾರೆ. ಕೋಟ್ಯಧಿಪತಿ ಮಹಿಳಾ ಉದ್ಯಮಿಗಳ ಪೈಕಿ ಬೆಂಗಳೂರಿನ ಎಂಯು ಸಿಗ್ಮಾದ ಅಂಬಿಗ ಸುಬ್ರಮಣಿಯನ್‌ ಅವರು ನಾಲ್ಕನೆ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತಿನ ಮೌಲ್ಯ ₹ 2,500 ಕೋಟಿಗಳಷ್ಟಿದೆ.

ಪತಂಜಲಿಯ ಆಚಾರ್ಯ ಬಾಲಕೃಷ್ಣ ಅವರು ದೇಶದ 10 ಮುಂಚೂಣಿ ಸಿರಿವಂತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಒಟ್ಟಾರೆ ₹ 70 ಸಾವಿರ ಕೋಟಿಗಳಷ್ಟು ಸಂಪತ್ತಿನ ಒಡೆಯರಾಗಿರುವ ಅವರು ಸದ್ಯಕ್ಕೆ 8ನೆ ಸ್ಥಾನದಲ್ಲಿ ಇದ್ದಾರೆ.

ದೇಶಿ ಕುಬೇರರ ಪಟ್ಟಿಯಲ್ಲಿ ಮಹಿಳೆಯರು ಶೇ 8.6ರಷ್ಟು ಪಾಲು ಹೊಂದಿದ್ದಾರೆ. ಒಪಿ ಜಿಂದಾಲ್‌ ಗ್ರೂಪ್‌ನ ಸಾವಿತ್ರಿ ಜಿಂದಾಲ್‌ ₹ 46,500 ಕೋಟಿಗಳ ಸಂಪತ್ತಿನ ಒಡತಿಯಾಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಗೋದ್ರೇಜ್‌ನ ಸ್ಮಿತಾ ವಿ. ಕೃಷ್ಣಾ ಅವರು ನಂತರದ ಸ್ಥಾನದಲ್ಲಿ ಇದ್ದಾರೆ.

ನಗರ ಸಿರಿವಂತರ ಸಂಖ್ಯೆ

# ಮುಂಬೈ 182

ದೆಹಲಿ 177

# ಬೆಂಗಳೂರು 51