ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ ನಿಧನ

0
23

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ (65) ಇಂದು(ಅಕ್ಟೋಬರ್ 18 ರಂದು) ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು:  ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ (65) ಇಂದು(ಅಕ್ಟೋಬರ್ 18 ರ ಶುಕ್ರವಾರ) ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದಾರೆ.

ಇತ್ತೀಚಿಗೆ ಹೆಬ್ಬೂರು ಹೋಬಳಿಯ ಸುಗ್ಗನ ಹಳ್ಳಿ-ಕೆಂಕೆರೆ ಬಳಿಯ ತೋಟಕ್ಕೆ ಹೋಗುವಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೆ.ಬಿ ಸಿದ್ದಯ್ಯ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ತೀವ್ರವಾಗಿ ರಕ್ತಸ್ರಾವವಾಗಿ ಶ್ವಾಸಕೋಶಕ್ಕೆ ಸೋಂಕು ತಗುಲಿದ್ದರಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಮತ್ತು ಒಬ್ಬ ಪುತ್ರರನ್ನು ಅಗಲಿದ್ದಾರೆ.

ಬಕಾಲ ಕವಿ ಯಂದು ಹೆಸರಾದ ಕವಿ.ಕೆ.ಬಿ.ಸಿದ್ದಯ್ಯ ಅವರು ಬರಹಕ್ಕಿಂತ ಹೆಚ್ಚು ನಡೆ ನುಡಿಯಿಂದ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದರು.ವಿಶಿಷ್ಠ ಬರಹಗಳಿಂದಲೇ ಸಾಹಿತ್ಯ ವಲಯದಲ್ಲಿ ಗಮನ ಸೆಳೆದಿದ್ದರು.

ಖಂಡಕಾವ್ಯವನ್ನು ಆಯ್ಕೆಮಾಡಿಕೊಂಡು ದೇಶಿಯತೆ ಮೂಲಕ ಜಗತ್ತನ್ನು ಕಾಣಲು ಬಯಸಿದ್ದರು. ಕಾವ್ಯದಲ್ಲಿ ಅಧ್ಯಾತ್ಮ ಪೋಣಿಸುವುದರಲ್ಲಿ ಪರಿಣಿತರು, ಭಾಷಣ ಶುರು ಮಾಡಿದರೆ ಸಿದ್ದಯ್ಯ ಅವರ ಮಾತಿನಲ್ಲಿ ಹೊಸ ವಿಷಯ ಪ್ರಸ್ತಾಪಆಗುತ್ತಿದ್ದವು. ಕೆಲವೊಮ್ಮೆ ಗಂಭೀರ ವಾಗ್ವಾದಕ್ಕೂ ಕಾರಣ ಆಗುತ್ತಿದ್ದವು

ದಲಿತ ಬಂಡಾಯದ ಸಾಹಿತ್ಯ ಚಿಂತಕರಾದ ಇವರೂ ವಿಮರ್ಶೆಯಲ್ಲೂ ಕೃಷಿ ಮಾಡಿದ್ದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನಿ ಎಂಬ ಖಂಡಕಾವ್ಯಗಳು ಇವರ ಕೈಯಿಂದ ರಚಿಸಲ್ಪಟ್ಟಿವೆ. ನಾಲ್ಕು ಶ್ರೇಷ್ಠ ಸತ್ಯಗಳು ಎನ್ನುವ ಕೃತಿಯನ್ನು ಸಂಪಾದಿಸಿದ್ದರು.

ದಲಿತ ಚಳುವಳಿಯೊಂದಿಗೆ ನಡೆದು ಬಂದ ಸಿದ್ದಯ್ಯ ಅವರು ರಾಜ್ಯದ ಸಾಹಿತ್ಯ ವಲಯದಲ್ಲಿ ಎದ್ದು ಕಾಣುತ್ತಿದ್ದರು.

ಸಿದ್ದಯ್ಯ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಕೆಂಕೆರೆ. ಹುಟ್ಟಿದ್ದು 1954 ರ ಮಾರ್ಚ್ 2 ರಂದು ತಂದೆ ಬೈಲಪ್ಪ ತಾಯಿ ಅಂತೂರಮ್ಮ

ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷನಲ್ಲಿ ಎಂ,ಎ ಪದವಿ ಗಳಿಸಿದ ಬಳಿಕ, ಅವರೂ ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕಾರ್ಯ ಆರಂಭಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು.

2013 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2004 ರಲ್ಲಿಯೇ ಸಂದಿತ್ತು. ಎಲ್ಲರೊಂದಿಗೆ ಇದ್ದ ಸಿದ್ದಯ್ಯ ಅವರು ಈಗ ಇಲ್ಲ ಎಂಬುದು ಸಾಹಿತ್ಯ ಸೇರಿದಂತೆ ಸಾಮಾಜಿಕ ವಲಯದಲ್ಲಿಯೂ ಕೊರತೆಯನ್ನು ಸೃಷ್ಟಿಸಿದೆ.