ಹಿರಿಯ ಕ್ರಿಕೆಟಿಗ ಮಾಧವ ಆಪ್ಟೆ ನಿಧನ

0
8

ಭಾರತದ ಹಿರಿಯ ಕ್ರಿಕೆಟ್‌ ಆಟಗಾರ ಮಾಧವ ಆಪ್ಟೆ (86) ಅವರು ಸೆಪ್ಟೆಂಬರ್ 23 ರ ಸೋಮವಾರ ಬೆಳಿಗ್ಗೆ ಹೃದಯಸ್ಥಂಭನದಿಂದ ನಿಧನರಾದರು.

ಮುಂಬೈ (ಪಿಟಿಐ): ಭಾರತದ ಹಿರಿಯ ಕ್ರಿಕೆಟ್‌ ಆಟಗಾರ ಮಾಧವ ಆಪ್ಟೆ (86) ಅವರು ಸೆಪ್ಟೆಂಬರ್ 23 ರ  ಸೋಮವಾರ ಬೆಳಿಗ್ಗೆ ಹೃದಯಸ್ಥಂಭನದಿಂದ ನಿಧನರಾದರು.

‘ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಕೊನೆ ಉಸಿರೆಳೆದರು’ ಎಂದು ಅವರ ಮಗ ವರ್ಮನ್‌ ಆಪ್ಟೆ ತಿಳಿಸಿದ್ದಾರೆ.

ಮಾಧವರಾವ್‌ ಲಕ್ಷ್ಮಣರಾವ್‌ ಅಪ್ಟೆ ಅವರು 1952ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ ಆಡಿದ್ದರು. ಮುಂಬೈನ  ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರಂಭ ಆಟಗಾರನಾಗಿ ಕಣಕ್ಕಿಳಿದಿದ್ದ ಅವರು ಎರಡು ಇನಿಂಗ್ಸ್‌ಗಳಿಂದ 40 ರನ್‌ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಜಯಗಳಿಸಿತ್ತು.

1953ರ ಏಪ್ರಿಲ್‌ನಲ್ಲಿ ಕಿಂಗ್ಸ್‌ಟನ್‌ನಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯ ಅವರ ಪಾಲಿಗೆ ಕೊನೆಯದ್ದಾಗಿತ್ತು. ಆ ಸರಣಿಯಲ್ಲಿ ಒಟ್ಟು 460 ರನ್‌ ಬಾರಿಸಿದ್ದರು. ಟೆಸ್ಟ್‌ ಸರಣಿಯೊಂದರಲ್ಲಿ 400ಕ್ಕೂ ಅಧಿಕ ರನ್‌ ಕಲೆಹಾಕಿದ ಭಾರತದ ಮೊದಲ ಆರಂಭ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಭಾಜನರಾಗಿದ್ದರು.

ಒಟ್ಟು ಏಳು ಟೆಸ್ಟ್‌ ಆಡಿದ್ದ ಆಪ್ಟೆ, 542 ರನ್‌ ಬಾರಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಅವರು 67 ಪ್ರಥಮ ದರ್ಜೆ ಪಂದ್ಯ ಗಳನ್ನು ಆಡಿ 3,336 ರನ್‌ ಗಳಿಸಿದ್ದರು. ಇದರಲ್ಲಿ ಆರು ಶತಕ ಮತ್ತು 16 ಅರ್ಧಶತಕಗಳು ಸೇರಿವೆ. ಕೆಲ ಕಾಲ ಮುಂಬೈ ತಂಡದ ನಾಯಕರಾಗಿದ್ದರು.

ಭಾರತದ ಕ್ರಿಕೆಟ್‌ ದಿಗ್ಗಜರಾದ ವಿನೂ ಮಂಕಡ್‌, ಪಾಲಿ ಉಮ್ರಿಗರ್‌, ವಿಜಯ್‌ ಹಜಾರೆ ಮತ್ತು ರೂಸಿ ಮೋದಿ ಅವರೊಂದಿಗೆ ಅನೇಕ ಪಂದ್ಯಗಳಲ್ಲಿ ಆಡಿದ್ದರು. ಆಪ್ಟೆ ಅವರ ನಿಧನಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸಲ್ಲಿಸಿದೆ.